ಜಿಲ್ಲೆ

ರಿಪ್ಪನ್‌ಪೇಟೆ: ಅಪಾಯದಲ್ಲಿ ಲಿಂಗದವೀರನ ಕೆರೆದಂಡೆ

ರಿಪ್ಪನ್‌ಪೇಟೆ: ಅರಸಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆನವಳ್ಳಿ ಗ್ರಾಮದ ಮುಡುಬದ ಲಿಂಗದವೀರನ ಕೆರೆ ದಂಡೆ ಅಪಾಯದ ಸ್ಥಿತಿಯಲ್ಲಿದೆ.

ಸತತ ಮಳೆಯಿಂದಾಗಿ 3 ಎಕರೆ ವಿಸ್ತೀರ್ಣದ ಕೆರೆ ಕೋಡಿ ಬಿದ್ದಿದೆ. ಕೆರೆಯ ದಂಡೆಯ ಮೇಲಿನ ಬೃಹದಾಕಾರದ ಮರವೊಂದು ಗಾಳಿ-ಮಳೆಗೆ ಬುಡಸಮೇತ ಉರುಳಿಬಿದ್ದಿದೆ. ಪರಿಣಾಮ ದಂಡೆಯ ಅರ್ಧಭಾಗ ಕೆರೆಯ ಪಾಲಾಗಿದ್ದು, ಯಾವ ಸಂದರ್ಭದಲ್ಲಾದರೂ ನೀರಿನ ರಭಸಕ್ಕೆ ದಂಡೆ ಒಡೆಯುವ ಅಪಾಯವಿದೆ. ದಂಡೆ ಒಡೆದರೆ ಅಚ್ಚುಕಟ್ಟು ಪ್ರದೇಶದ 30 ಎಕರೆ ಕೃಷಿ ಜಮೀನು ಕೊಚ್ಚಿಕೊಂಡು ಹೋಗುವ ಸಾಧ್ಯತೆಯಿದ್ದು ರೈತರು ಆತಂಕಗೊಂಡಿದ್ದಾರೆ.

ಮರಬಿದ್ದು ದಂಡೆ ಹಾನಿಯಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಹೊಣೆಗೇಡಿತನ ಪ್ರದರ್ಶಿಸಿದ್ದಾರೆ. ಕೂಡಲೆ ದುರಸ್ತಿ ಕೈಗೊಂಡು ದಂಡೆಯಲ್ಲಿರುವ ಹಳೆಯ ಮರಗಳನ್ನು ತೆರವುಗೊಳಿಸದಿದ್ದಲ್ಲಿ ಸಂಪೂರ್ಣ ಕೆರೆಯೆ ಒಡೆಯುವ ಅಪಾಯವಿರುವುದರಿಂದ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಅಧಿಕಾರಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.