ಮೈಸೂರು: ಬಿಜೆಪಿ ರಿಪೇರಿಯಾದರೆ ಅದರೊಂದಿಗೆ ಹೋಗುತ್ತೇನೆ. ಇಲ್ಲದಿದ್ದರೆ ಹೊಸ ಪಕ್ಷ ಕಟ್ಟಿ ಸಿಎಂ ಆಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನಾದರೂ ನಮ್ಮ ಬಿಜೆಪಿ ವರಿಷ್ಠರು ಎಚ್ಚೆತ್ತುಕೊಳ್ಳಬೇಕು. ಬಿ.ಎಸ್.ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಒತ್ತಡಕ್ಕೆ ನನ್ನ ಉಚ್ಚಾಟನೆ ಮಾಡಿದರು. ಈಗ ಅಮಿತ್ ಷಾ ಅವರಿಗೂ ತಪ್ಪು ಮಾಡಿದೆ ಅನ್ನಿಸಿದೆ. 2028ರಲ್ಲಿ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ. ಪ್ರತಾಪ್ ಸಿಂಹ, ರಮೇಶ್ ಜಾರಕಿಹೊಳಿ, ಕುಮಾರ್‌ಬಂಗಾರಪ್ಪ ಎಲ್ಲರೂ ಕೂಡಿ ಬದಲಾವಣೆ ತರುತ್ತೇವೆ ಎಂದು ಗುಡುಗಿದರು.
‘ನಾನು ತಿನ್ನಲ್ಲ, ತಿನ್ನೂರಿಗೂ ಬಿಡಲ್ಲ’ ಎಂದು ನರೇಂದ್ರ ಮೋದಿ ಹೇಳುತ್ತಾರೆ. ಆದರೆ ಇಲ್ಲಿ ಯಡಿಯೂರಪ್ಪ ಕುಟುಂಬ ಹಣ ಲೂಟಿ ಮಾಡಿದೆ. ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಬೇಕು. ಅದು ಸಾಧ್ಯವಾಗದಿದ್ದರೆ ನಮ್ಮ ನಿಲುವು ಸ್ಪಷ್ಟ. ನಮ್ಮದೇ ಸರ್ಕಾರ ಬರಲು ಏನು ಬೇಕೋ ಅದನ್ನೆಲ್ಲವನ್ನೂ ಮಾಡುತ್ತೇವೆ ಎಂದರು.
ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲ್ಲ. ಪೂಜ್ಯ ತಂದೆ, ಮಗ ಇಬ್ಬರನ್ನು ಬಿಟ್ಟು ನಮ್ಮ ಜತೆಗೆ ಬಿಜೆಪಿಯ ಎಲ್ಲರೂ ಇದ್ದಾರೆ. ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡೋರು ನಾಶ ಆಗಲಿ ಎಂದು ಚಾಮುಂಡೇಶ್ವರಿ ತಾಯಿ ಬಳಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಗಣಪತಿ ವಿಸರ್ಜನೆ ವೇಳೆ ಈ ಸರ್ಕಾರದಲ್ಲಿ ಆಗುತ್ತಿರುವ ಅನಾಹುತಗಳು ಜನ ನೋಡುತ್ತಿದ್ದಾರೆ. ಹಿಂದು ವಿರೋಧಿ ನೀತಿ ಅನುಸರಿದರೆ ಈ ಸರ್ಕಾರ 5 ವರ್ಷ ಇರಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ಅದರಲ್ಲಿ ಬಿಜೆಪಿ ನಾಯಕರು ಕೂಡ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡ್ತಾರೆ. ಮುಸ್ಲಿಂ ಸಮುದಾಯಕ್ಕೆ ಆಗೋ ಕೆಲಸ ಹಿಂದುಗಳಿಗೆ ಆಗುತ್ತಿಲ್ಲ ಎಂದು ದೂರಿದರು.
ಮದ್ದೂರಿನಲ್ಲಿ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನನ್ನ ಮೇಲೆ ಎಷ್ಟು ಕೇಸ್ ಬೇಕಾದರೂ ಹಾಕಲಿ. ಈಗಾಗಲೇ 70 ಕೇಸ್ ಹಾಕಿದ್ದಾರೆ. ಇದಕ್ಕೆಲ್ಲ ನಾನು ಹೆದರಲ್ಲ ಎಂದು ತಿಳಿಸಿದರು.
ಮದ್ದೂರಿನಲ್ಲಿ ಅಕ್ರಮ ಮಸೀದಿ ಇದೆ. ಅದಕ್ಕೆ ದಾಖಲೆ ಇಲ್ಲ. ಅಂತ ಕಡೆಯಿಂದ ಕಲ್ಲು ಹೊಡೆದರೆ ಏನು ಮಾಡಬೇಕು. ಇನ್ಮುಂದೆ ಮಸೀದಿ ಸಂಪೂರ್ಣ ತಪಾಸಣೆ ಆಗಬೇಕು. ಕಲ್ಲು, ಸಶಸ್ತ್ರ ಇದ್ದರೆ ಮಸೀದಿ ಮೌಲಿಯ ಜವಾಬ್ದಾರಿ ಎಂದು ಹೇಳಬೇಕು. ಇಲ್ಲದಿದ್ದರೆ ಅಂತಹ ಕಟ್ಟಡ ಕೆಡವಬೇಕು. ಈ ಕುರಿತು ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಶಿವಮೊಗ್ಗದಲ್ಲಿ ಗಲಾಟೆ ಆಯಿತು. ಆಗ ಯಡಿಯೂರಪ್ಪ ಏನು ಕ್ರಮ ತೆಗೆದುಕೊಳ್ಳಲಿಲ್ಲ. ಅದಕ್ಕಾಗಿ ಬಿಜೆಪಿ ನೆಲ ಕಚ್ಚಿತ್ತು. ಈಗ ಮತ್ತೆ ಯಡಿಯೂರಪ್ಪ ಮಗ ಬಂದಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಕೊಡುಗೆ ಏನು? ಒಕ್ಕಲಿಗರ ಸಮುದಾಯಕ್ಕೆ ಡಿಕೆಶಿ ಕೊಡುಗೆ ಏನು? ಕಾಂಗ್ರೆಸ್‌ಗೆ ಹಿಂದುಗಳು ವೋಟ್ ಹಾಕಿಲ್ವೇ? ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳದೆ ಇದ್ದರೆ ನೇಪಾಳ ಮಾದರಿಯಲ್ಲಿ ರಾಜ್ಯದಲ್ಲಿ ಕ್ರಾಂತಿ ಆಗಲಿದೆ ಎಂದು ವಾಗ್ದಾಳಿ ನಡೆಸಿದರು.
ಭಾನು ಮುಷ್ತಾಕ್ ದಸರಾ ಉದ್ಘಾಟನೆ ವಿಚಾರ ಕುರಿತು ಮಾತನಾಡಿದ ಯತ್ನಾಳ್, ಚಾಮುಂಡಿತಾಯಿಗೆ ಹೂವು ಹಾಕೋರು ಸನಾತನಿಗಳು ಆಗಿರಬೇಕು.
ಮೂರ್ತಿ ಪೂಜೆ ಮಾಡಲ್ಲ ಎಂದು ವಿರೋಧಿಸುವವರಿಂದ ದಸರಾ ಉದ್ಘಾಟನೆ ಸರಿಯಲ್ಲ. ಅವರು ಬೇಕಾದರೆ ಬೇರೆ ಬೇರೆ ಕಾರ್ಯಕ್ರಮ ಉದ್ಘಾಟನೆ ಮಾಡಲಿ. ಈ ಬಗ್ಗೆ ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಏನು ಹೇಳುತ್ತಾರೆ. ಮೂರ್ತಿ ಪೂಜೆ ಒಪ್ಪುತ್ತಾರೆಯೇ? ಸಿದ್ದರಾಮಯ್ಯ ರಾಜಕೀಯ ಅಂತ್ಯ ಚಾಮುಂಡಿಬೆಟ್ಟದಿಂದಲೇ ಆಗುತ್ತದೆ ಎಂದು ಹರಿಹಾಯ್ದರು.
ಶಾಸಕ ಪ್ರದೀಪ್ ಈಶ್ವರ್ ಕೋತಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಾನು ಮನುಷ್ಯರ ಹೇಳಿಕೆಗೆ ಅಷ್ಟೇ ಉತ್ತರ ಕೊಡುತ್ತೇನೆ.
ಇಂತಹ ಬಾಲಿಶ ಹೇಳಿಕೆ ಕೊಡೋರಿಗೆ ಉತ್ತರ ಕೊಡಲ್ಲ. ಯಾರು ಕೋತಿ ಅಂತ ಜನರಿಗೆ ಗೊತ್ತು. ಸುಧಾಕರ್ ಸಂಸದರಾದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದ. ಇಷ್ಟು ವರ್ಷವಾದರೂ ರಾಜೀನಾಮೆ ಕೊಟ್ಟಿಲ್ಲ. ಅಂತಹವರಿಗೆ ಉತ್ತರ ಕೊಡಲ್ಲ. ನನ್ನ ಉತ್ತರ ಸಿದ್ದರಾಮಯ್ಯ, ಡಿಕೆಶಿ, ಯಡಿಯೂರಪ್ಪರಿಗೆ ಮಾತ್ರ ಎಂದು ಯತ್ನಾಳ್ ಹೇಳಿದರು.