ಜಿಲ್ಲೆ

ರಿಕವರಿ ಮಷಿನ್ ಅಳವಡಿಕೆ ಯಾವಾಗ?

ಮಂಜುನಾಥ ಕೋಳಿಗುಡ್ಡ ಬೆಳಗಾವಿ

ರಾಜ್ಯದಲ್ಲಿರುವ ಖಾಸಗಿ, ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಸ್ವಯಂಚಾಲಿತ ಸಕ್ಕರೆ ಪ್ರಮಾಣ ಅಳೆಯುವ ಯಂತ್ರ (ಆಟೋಮೇಟಿವ್ ಶುಗರ್ ರಿಕವರಿ ಮಷಿನ್) ಅಳವಡಿಸುವ ಯೋಜನೆ ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಒದಗಿಸಲು, ಕಬ್ಬು ಇಳುವರಿ ಖಚಿತಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿರುವ 79 ಸಕ್ಕರೆ ಕಾರ್ಖಾನೆಗಳಿಗೆ ಕಡ್ಡಾಯವಾಗಿ ಸಕ್ಕರೆ ಪ್ರಮಾಣ ಅಳೆಯುವ ಯಂತ್ರ ಅಳವಡಿಸುವಂತೆ 2020ರಲ್ಲಿ ಅಂದಿನ ಸಕ್ಕರೆ ಸಚಿವ ಸಿ.ಟಿ.ರವಿ ಸಕ್ಕರೆ ಆಯುಕ್ತರಿಗೆ ಆದೇಶಿಸಿದ್ದರು. ನಂತರ ದಿನಗಳಲ್ಲಿ ಸಚಿವರ ಖಾತೆ ಬದಲಾವಣೆ, ಕಾರ್ಖಾನೆಗಳ ಒತ್ತಡಕ್ಕೆ ಮಣಿದು ಯಂತ್ರ ಅಳವಡಿಕೆ ಅರ್ಧಕ್ಕೆ ಕೈಬಿಟ್ಟಿತ್ತು. ಇದು ರೈತರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

ರಾಜ್ಯದಲ್ಲಿ 6.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 521.80 ಲಕ್ಷ ಮೆ.ಟನ್ ಕಬ್ಬು ಉತ್ಪಾದನೆಯಾಗುತ್ತಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ಕಬ್ಬಿನ ರಿಕವರಿ (ಸಕ್ಕರೆ ಅಂಶ) ಕಡಿಮೆ ತೋರಿಸುತ್ತಿವೆ. ಇದರಿಂದಾಗಿ ಕಬ್ಬು ಬೆಳೆಗಾರರಿಗೆ ನ್ಯಾಯಸಮ್ಮತ ಮತ್ತು ಮೌಲ್ಯಾಧಾರಿತ (ಎಫ್‌ಆರ್‌ಪಿ) ದರ ಸಿಗುತ್ತಿಲ್ಲ. ಉತ್ತಮವಾಗಿ ಕಬ್ಬು ಬೆಳೆಸಿದವರಿಗೆ ಮತ್ತು ಕಳಪೆ ಕಬ್ಬು ಬೆಳೆಸಿದವರಿಗೆ ಒಂದೇ ರೀತಿಯಲ್ಲಿ ಇಳುವರಿ

ಪರಿಗಣಿಸಿ ಬಿಲ್ ನೀಡುತ್ತಿವೆ. ಅಲ್ಲದೆ, ಕಬ್ಬು ಕಟಾವು ಮತ್ತು ಸಾಗಣೆ (ಎಚ್‌ಆ್ಯಂಡ್‌ಟಿ) ದರ ಬೇಕಾಬಿಟ್ಟಿಯಾಗಿ ನಿಗದಿಪಡಿಸಲಾಗುತ್ತಿದೆ ಎನ್ನುವುದು ರೈತರ ಆರೋಪ.

ಕಬ್ಬಿನ ತೂಕದಲ್ಲಿ ಸಾಕಷ್ಟು ಏರುಪೇರು ಮಾಡಿ ಟನ್ ಕಬ್ಬಿಗೆ 1 ಸಾವಿರ ರೂ. ನಷ್ಟ ಉಂಟು ಮಾಡಲಾಗುತ್ತಿದೆ. ಆದ್ದರಿಂದ ಸ್ವಯಂಚಾಲಿತ ಸಕ್ಕರೆ ಪ್ರಮಾಣ ಅಳೆಯುವ ಯಂತ್ರ ಅಳವಡಿಸದಿರುವ ಕಾರ್ಖಾನೆಗಳ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.

2 ಕೋಟಿ ರೂ. ವೆಚ್ಚ: ವಿದೇಶಗಳಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಸ್ವಯಂಚಾಲಿತ ಕಬ್ಬು ಇಳುವರಿ ಮಾಪನ ಯಂತ್ರಗಳನ್ನು ಅಳವಡಿಸಲಾಗಿದೆ. ಅದೇ ಮಾದರಿಯಲ್ಲಿ ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಯಂತ್ರಗಳನ್ನು ಅಳವಡಿಸಲಾಗಿತ್ತು. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ.

ಈ ಯಂತ್ರಗಳ ಅಳವಡಿಕೆಗೆ 2 ಕೋಟಿ ರೂ.ವರೆಗೆ ವೆಚ್ಚವಾಗುತ್ತಿರುವುದರಿಂದ ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಈ ಹಿನ್ನೆಲೆ ಯಂತ್ರಗಳನ್ನು ಅಳವಡಿಸುವ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಜತೆಗೆ ಚರ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಸ್ವಯಂಚಾಲಿತ ಸಕ್ಕರೆ ಪ್ರಮಾಣ ಅಳೆಯುವ ಯಂತ್ರ, ಡಿಜಿಟಲ್ ತೂಕದ ಯಂತ್ರಗಳನ್ನು ಅಳಡಿಸುವಂತೆ, ದರ ನಿಗದಿಪಡಿಸುವಂತೆ ಹೋರಾಟ ನಡೆಸಲಾಗುತ್ತಿದೆ. ಆದರೆ, ಸರ್ಕಾರ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಕಬ್ಬು ಬೆಳೆಗಾರರಿಗೆ ನಷ್ಟವಾಗುತ್ತಿದೆ ವಿನಃ ಸರ್ಕಾರಕ್ಕೆ, ಕಾರ್ಖಾನೆಗಳಿಗೆ ಅಲ್ಲ. | ಪ್ರಕಾಶ ನಾಯಕ, ರವಿ ಸಿದ್ದಮ್ಮಣ್ಣವರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು