ಮೈಸೂರು: ನಗರದ ವರ್ತುಲ ರಸ್ತೆಯ ಬೀದಿ ದೀಪ ಅಳವಡಿಕೆ ಕಾಮಗಾರಿಯನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ನಗರ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವರ್ತುಲ ರಸ್ತೆಯಲ್ಲಿ ಬೀದಿ ದೀಪ ಅಳವಡಿಕೆ ಹಾಗೂ ರಸ್ತೆ ಬದಿ ವ್ಯಾಪಾರಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ನಗರ ಪಾಲಿಕೆಯ ಶ್ರೀ ಜಯಚಾಮರಾಜೇಂದ್ರ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಒಂದು ತಿಂಗಳ ನಂತರ ವಿಧಾನಸಭಾ ಚುನಾವಣೆಯ ಚಟುವಟಿಕೆಗಳು ಪ್ರಾರಂಭವಾಗುವ ನಿರೀಕ್ಷೆ ಇದೆ. ಆ ನಂತರ ಎಲ್ಲ ಅಧಿಕಾರಿಗಳು ಚುನಾವಣಾ ಚಟುವಟಿಕೆ ಯಲ್ಲಿ ಸಕ್ರೀಯರಾಗುತ್ತಾರೆ. ಹಾಗಾಗಿ ಒಂದು ತಿಂಗಳ ಒಳಗೆ ವರ್ತುಲ ರಸ್ತೆಯಲ್ಲಿ ಬಾಕಿ ಇರುವ ಬೀದಿ ದೀಪ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ನವೆಂಬರ್ ತಿಂಗಳಿನಲ್ಲಿ ವರ್ತುಲ ರಸ್ತೆಯಲ್ಲಿ ಬೀದಿ ದೀಪವನ್ನು ಬೆಳಗಿಸುತ್ತೇವೆ ಎಂದು ನಗರದ ಜನತೆಗೆ ನಾವು ಭರವಸೆ ನೀಡಿ ಆ ಪ್ರಕಾರ ಬೆಳಕನ್ನು ನೀಡಿದ್ದೇವೆ. ನಗರ ಪಾಲಿಕೆ ಹಾಗೂ ಮುಡಾದ ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದೆ. ಉಳಿದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.
ನಗರ ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ವರ್ತುಲ ರಸ್ತೆಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ಶೇ.99 ರಷ್ಟು ಪೂರ್ಣಗೊಂಡಿದ್ದು, ಹೈಮಾಸ್ಟ್ ಬೀದಿದೀಪ ಅಳವಡಿಸಲು ಬಾಕಿ ಇರುವ ಜಾಗದಲ್ಲಿ ಮಾತ್ರ ಕೇಬಲ್ ಅಳವಡಿಕೆ ಕಾಮಗಾರಿ ಬಾಕಿ ಇದೆ. 4,300 ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ಈ ಪೈಕಿ 4,236 ಬಲ್ಬ್‌ಗಳ ಅವಡಿಕೆ ಪೂರ್ಣಗೊಂಡಿದೆ. 60 ಮಿನಿ ಹೈಮಾಸ್ಟ್ ಲೈಟ್ ಅಳವಡಿಕೆಗೆ ಬಾಕಿ ಇದೆ. 18 ಡಾರ್ಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಆ ಜಾಗಗಳಲ್ಲಿ ಮಿನಿ ಹೈಮಾಸ್ಟ್‌ಲೈಟ್ ಅಳವಡಿಸಲಾಗುವುದು ಎಂದರು.
ವಿದ್ಯುತ್ ದೀಪಗಳನ್ನು ಆನ್ ಮತ್ತು ಆಫ್ ಮಾಡಲು ಸೆಂಟ್ರಲೈಜ್ಡ್ ಕಂಟ್ರೋಲ್ ಆ್ಯಂಡ್ ಮೋನಿಟರಿಂಗ್ ಸಿಸ್ಟಮ್ (ಸಿಸಿಎಂಎಸ್)ಗಳನ್ನು 90 ಕಡೆಗಳಲ್ಲಿ ಅಳವಡಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 70 ಕಡೆಗಳಲ್ಲಿ ಅಳವಡಿಸಲಾಗಿದೆ. ಇನ್ನು ಎರಡು ಮೂರು ದಿನಗಳ ಒಳಗೆ ಉಳಿದ 20 ಸಿಸ್ಟಮ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಒಟ್ಟು 20 ಹೈಮಾಸ್ಟ್ ಲೈಟ್ ಅಳವಡಿಸಲಾಗುವುದು. ಹೈಮಾಸ್ಟ್ ಲೈಟ್ ಉತ್ಪಾದನೆಯಲ್ಲಿ ವಿಳಂಬವಾಗಿದ್ದು, ಇನ್ನು 15 ರಿಂದ 20 ದಿನಗಳ ಒಳಗೆ ಅಳವಡಿಸಲಾಗುವುದು ಎಂದು ಹೇಳಿದರು.
ಅರ್ಹರಿಗೆ ಸಾಲಸೌಲಭ್ಯ ನೀಡಿ: ಮೀಟರ್ ಬಡ್ಡಿ ಹಾವಳಿಯಿಂದ ಬೀದಿಬದಿ ವ್ಯಾಪಾರಿಗಳು ಸಾಕಷ್ಟು ಸಂಕಷ್ಟ ಅನುಭವಿಸುತ್ತಿರುವುದನ್ನು ಗಮನಿಸಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಜಾರಿಗೆ ತರಲಾಗಿದ್ದು, ಯೊಜನೆಯಡಿ ಅರ್ಹ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿ ಸಾಲ ಸೌಲಭ್ಯ ನೀಡಬೇಕು ಎಂದು ಸಂಸದ ಪ್ರತಾಪ್ ಸಿಂಹ ನಿರ್ದೇಶನ ನೀಡಿದರು.
ಒಂದೇ ಕುಟುಂಬದ 5 ಜನರಿಗೆ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗಿದ್ದು, ಅರ್ಹರಿಗೆ ಸಾಲಸೌಲಭ್ಯ ದೊರೆತ್ತಿಲ್ಲ ಎಂದು ಬೀದಿಬದಿ ವ್ಯಾಪಾರಿಗಳು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಬೀದಿಬದಿ ವ್ಯಾಪಾರಿಗಳು ಅರ್ಹರ ಪಟ್ಟಿಯನ್ನು ತಯಾರಿಸಿ ನನಗೆ ನೀಡಿ, ಅವರಿಗೆ ಸಾಲಸೌಲಭ್ಯ ಕೊಡಿಸುವ ಜವಾಬ್ದರಿ ನನ್ನದು. ನಾನೇ ಖುದ್ದಾಗಿ ಸಾಲಸೌಲಭ್ಯ ಕೊಡಿಸುತ್ತೇನೆ. ಸದ್ಯದಲ್ಲಿಯೇ ಈ ಬಗ್ಗೆ ಚರ್ಚಿಸಲು ಲೀಡ್‌ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ಪಾಲಿಕೆ ಉಪ ಆಯುಕ್ತರಾದ ರೂಪಾ, ಮಹೇಶ್ ಇದ್ದರು.