ಜಿಲ್ಲೆ

ರಾಹುಲ್ ಗಾಂಧಿ ರಾಜ್ಯ ಭೇಟಿಗೆ ಪ್ರಾಮುಖ್ಯತೆ ಬೇಡ

ಹುಬ್ಬಳ್ಳಿ : ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಕರ್ನಾಟಕ ಭೇಟಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಅಗತ್ಯ ಇಲ್ಲ. ಅವರ ಮಾತಿಗೆ ರಾಜ್ಯದ ಜನರು ಯಾವುದೇ ಬೆಲೆ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಕಳೆದ ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಕ್ಕೂ, ಈ ಬಾರಿಯ ಭೇಟಿಗೂ ಹೆಚ್ಚು ವ್ಯತ್ಯಾಸ ಇದೆ. ರಾಜ್ಯ ಭೇಟಿಯ ಮೊದಲು ಅವರು ಬ್ರಿಟನ್ ವಿಶ್ವವಿದ್ಯಾಲಯದಲ್ಲಿ ದೇಶದ ವಿರುದ್ಧ ಮಾತನಾಡಿದ್ದಾರೆ. ಹೀಗಾಗಿ, ಜನರು ಅವರಿಗೆ ಹೆಚ್ಚು ಬೆಲೆ ಕೊಡುತ್ತಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಾ. 25ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. 24 ಮತ್ತು 26ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಬಾಬುರಾವ ಚಿಂಚನಸೂರ ಅವರು ಕಾಂಗ್ರೆಸ್​ನಿಂದ ಬಂದಿದ್ದರು. ಇದೀಗ ಮತ್ತೆ ಅದೇ ಪಕ್ಷಕ್ಕೆ ವಾಪಸ್ ಹೋಗುತ್ತಿದ್ದಾರೆ. ಅವರ ಕಾಂಗ್ರೆಸ್ ಸೇರ್ಪಡೆಯಿಂದ ಯಾವುದೇ ರೀತಿಯ ವ್ಯತ್ಯಾಸ ಆಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್​ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಅದೊಂದು ವಿಸಿಟಿಂಗ್ ಕಾರ್ಡ್. ಭಾರತದಲ್ಲಿ ಕಾಂಗ್ರೆಸ್ ಪತನ ಪ್ರಾರಂಭಗೊಂಡಿದೆ ಎಂದು ಟೀಕಿಸಿದ ಸಿಎಂ ಬೊಮ್ಮಾಯಿ, ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್​ನವರು ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳು ಇದುವರೆಗೂ ಈಡೇರಿಲ್ಲ. ಆ ಪಕ್ಷದವರು ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.