ಚಿಕ್ಕಮಗಳೂರು: ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗ ನಾಲ್ಕು ಸ್ಲಾಬ್ ಮಾಡಿ ಬಡವರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಬಿಜೆಪಿಗರು ಪ್ರಚಾರ ಮಾಡಿಕೊಂಡರು. ಬಿಎಸ್‌ಟಿ ಸ್ಲಾಬ್ ಗಳನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಬಿಂಬಿಸುವ ಕೆಲಸವನ್ನು ಮಾಡಿದರು. ಆದರೆ ಅಂದು ರಾಹುಲ್ ಗಾಂಧಿ ಹೇಳಿದ ಮಾತುಗಳು ಇಂದು ನಿಜವಾಗಿವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ಕಿಡಿಕಾರಿದರು.
ನಗರದ ಒಕ್ಕಲಿಗ ಸಮುದಾಯಭವನದಲ್ಲಿ ಮಂಗಳವಾರ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂದು ಬಿಜೆಪಿಗರು ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಬಿಂಬಿಸಿದ್ದರು. ಆದರೆ ಇಂದು ಜಿಎಸ್‌ಟಿ ಸ್ಲಾಬ್ ಗಳನ್ನು ಅಂದು ರಾಹುಲ್ ಗಾಂಧಿ ಹೇಳಿದಂತೆಯೇ ಕಡಿಮೆ ಮಾಡಿದ್ದಾರೆ. ಇದಕ್ಕೆ ಬಿಜೆಪಿಗರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ನೋಟು ಅಮಾನ್ಯೀರಣ ಮಾಡಿದಾಗ ಕೇವಲ ೫೦ ದಿನ ಕಾಲಾವಕಾಶ ನೀಡಿ ಕಪ್ಪು ಹಣ ಹೊರಬರುತ್ತದೆ ಎಂದಿದ್ದರು. ೧೫.೪೩ ಲಕ್ಷ ರೂ. ಮೌಲ್ಯದ ನೋಟುಗಳು ಅಮಾನ್ಯಗೊಂಡಿದ್ದವು. ಇದರಲ್ಲಿ ಮೂರು ಲಕ್ಷ ಕೋಟಿ ರೂ. ಕಪ್ಪು ಹಣ ಇದೆ ಎಂದಿದ್ದರು. ಆದರೆ ನೋಟು ಅಮಾನ್ಯೀಕರಣದಿಂದ ಬ್ಯಾಂಕ್ ಎದುರು ಸರದಿ ಸಾಲಿನಲ್ಲಿ ನಿಂತ ೧೦೩ ಜನ ಬಡವರು ಸಾವನ್ನಪ್ಪಿದರೇ ಹೊರತು ಯಾವ ಕಪ್ಪು ಹಣವೂ ಹೊರಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದ ಒಟ್ಟಾರೆ ಸಾಲ ೫೫ ಲಕ್ಷ ಕೋಟಿ ರೂ. ಆಗಿತ್ತು. ಆದರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ದೇಶದ ಸಾಲ ಇನ್ನೂರು ಲಕ್ಷ ಕೋಟಿ ರೂ. ಆಗಿದೆ. ಯುಪಿಎ ಅವಧಿಯಲ್ಲಿ ಡಾಲರ್ ಎದುರು ಭಾರತೀಯ ಕರೆನ್ಸಿ ಮೌಲ್ಯ ೫೫ ರೂಪಾಯಿ ಆಗಿತ್ತು. ಆದರೆ ಇಂದು ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ೯೬ ರೂ. ಆಗಿದೆ. ಇದನ್ನು ಪ್ರಶ್ನಿಸಿದವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
೨೦ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಎಲ್ಲಿಯೂ ಬಡವರ ಪರ ಯೋಜನೆ ಅನುಷ್ಠಾನ ಮಾಡಿಲ್ಲ. ಅದೇ ಕರ್ನಾಟಕ ರಾಜ್ಯದಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿ ವಾರ್ಷಿಕವಾಗಿ ೬೦ ಸಾವಿರ ಕೋಟಿ ರೂಪಾಯಿಗಳನ್ನು ಬಡವರಿಗೆ ನೇರವಾಗಿ ನೀಡಲಾಗುತ್ತಿದೆ. ಅಂದರೆ ಐದು ವರ್ಷಕ್ಕೆ ೩ ಲಕ್ಷ ಕೋಟಿ ರೂ.ಗಳನ್ನು ಬಡವರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳ ಮೂಲಕ ನೀಡುತ್ತಿz್ದೆÃವೆ. ಈ ಕಾರ್ಯಕ್ರಮಗಳ ಬಗ್ಗೆ ಬಿಜೆಪಿಯವರು ಉಡಾಫೆಯಾಗಿ ಮಾತನಾಡುತ್ತಾರೆ. ಕಾರಣ ಈ ಯೋಜನೆಗಳಿಂದ ಅನುಕೂಲವಾಗುವುದು ಬಡವರಿಗೆ. ಶಕ್ತಿ ಯೋಜನೆ ಅನುಷ್ಠಾನದಿಂದ ಧರ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಆರ್ಥಿಕ ವಹಿವಾಟು ಹೆಚ್ಚಾಗಿದೆ. ಇದನ್ನು ಬಿಜೆಪಿಯವರು ಹೇಳುವುದೇ ಇಲ್ಲ ಎಂದು ದೂರಿದರು.
ಪ್ರತಿದಿನ ಬೆಳಗ್ಗೆ ಎದ್ದರೆ ಕಾಂಗ್ರೆಸ್ಗೆ ಬೈಯುವ ಬಿಜೆಪಿ ನಾಯಕರು, ತಾವು ಹಿಂದು ಪರ ಕಾಂಗ್ರೆಸ್ ಹಿಂದು ವಿರೋಧಿ ಎನ್ನುತ್ತಾರೆ. ಆದರೆ ದೇಶದಲ್ಲಿ ೬.೭೩ ಲಕ್ಷ ಗುಡಿಗಳನ್ನು ಕಟ್ಟಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಪುಣ್ಯಾತ್ಮರು ಒಂದು ಗುಡಿ ಕಟ್ಟಲಿಲ್ಲ. ಯಾವುದಾದರೂ ದೇವಾಲಯ ಅವರು ಕಟ್ಟಿದ್ದೆ ಆಗಿದ್ದಲ್ಲಿ ಅದು ಜನರ ತೆರಿಗೆ ದುಡ್ಡಿನಲ್ಲಿಯೇ ಕಟ್ಟಿದ್ದಾರೆ ಎಂದು ಟೀಕಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಚ್.ಡಿ.ತಮ್ಮಯ್ಯ ವಹಿಸಿದ್ದರು. ಶಾಸಕ ಜಿ.ಎಚ್.ಶ್ರೀನಿವಾಸ್, ಭದ್ರಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮAತ್, ಪ್ರಮುಖರಾದ ಬಿ.ಎಚ್.ಹರೀಶ್, ನಯಾಜ್ ಅಹಮದ್, ಮೊಹಮದ್ ಮೊಹಿಸಿನ್ ಮತ್ತಿತರರಿದ್ದರು.