ಚಾಮರಾಜನಗರ : ಹಾಲು ಸರಬರಾಜು ಮಾಡುವ ಸದಸ್ಯರ ರಾಸುಗಳಿಗೆ ಒಕ್ಕೂಟದಿಂದ ವಿಮೆ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ವೈ.ಸಿ.ನಾಗೇಂದ್ರ ತಿಳಿಸಿದರು.
ತಾಲೂಕಿನ ಕುದೇರಿನಲ್ಲಿರುವ ಹಾಲು ಒಕ್ಕೂಟದ ಘಟಕ ಪ್ರಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಒಕ್ಕೂಟವು ಈಗ ಲಾಭದತ್ತ ಸಾಗುತ್ತಿದ್ದು, 3.50 ಲಕ್ಷಕ್ಕೂ ಹೆಚ್ಚು ಹಾಲು ಶೇಖರಣೆಯಾಗುತ್ತಿದೆೆ. ನಂದಿನಿ ಹಾಲು ಪ್ಯಾಕೇಟ್ ರೂಪದಲ್ಲಿ ಮಾರುಕಟ್ಟೆಯಲ್ಲಿ 40 ಸಾವಿರ ಲೀಟರ್ ಮಾತ್ರ ಮಾರಾಟವಾಗುತ್ತಿದೆ. ಇನ್ನುಳಿದ 3 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲನ್ನು ಸಂಸ್ಕರಣೆ ಮಾಡಿ ನಂದಿನಿ ಉತ್ಪನ್ನಗಳನ್ನು ತಯಾರು ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಲ್ಲೂ ಉತ್ತಮ ಲಾಭ ಇದೆ ಎಂದರು.
ಒಕ್ಕೂಟಕ್ಕೆ ಪೂರೈಕೆಯಾಗುತ್ತಿರುವ ಹಾಲಿನ ಪ್ರಮಾಣ ಹೆಚ್ಚಾಗಿದ್ದು, ಇದಕ್ಕೆ ಅನುಗುಣವಾಗಿ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣದಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಚಾಮುಲ್ ನಿರ್ದೇಶಕರಾದ ಎಚ್.ಎಸ್.ಬಸವರಾಜು, ಎಚ್.ಎಸ್.ನಂಜುಂಡಪ್ರಸಾದ್, ಎಸ್.ಮಹದೇವಸ್ವಾಮಿ, ಸದಾ ಶಿವಮೂರ್ತಿ, ಎಂ.ಸಿ.ಸುನೀಲ್, ನಂಜುಂಡಸ್ವಾಮಿ, ಶೀಲಾ ಪುಟ್ಟರಂಗಶೆಟ್ಟಿ, ಶಾಹುಲ್ ಅಹಮದ್, ಡಾ.ಶಿವಣ್ಣ, ಅಯ್ಯನಪುರ ಶಿವಕುಮಾರ್, ವ್ಯವಸ್ಥಾಪಕ ನಿರ್ದೇಶಕ ಎಂ.ರಾಜಶೇಖರಮೂರ್ತಿ, ಆಡಳಿತ ವಿಭಾಗದ ವ್ಯವಸ್ಥಾಪಕ ಶ್ರೀಕಾಂತ್ ಹಾಗೂ ಜಿಲ್ಲೆಯ ಡೇರಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತಿತರರಿದ್ದರು.