ಜಿಲ್ಲೆ

ರಾಸುಗಳಿಗೆ ತಪ್ಪದೆ ವಿಮೆ ಮಾಡಿಸಿ

ಮಳವಳ್ಳಿ: ವಿವಿಧ ಕಾಯಿಲೆಗಳಿಂದ ಅಕಾಲಿಕವಾಗಿ ಜಾನುವಾರುಗಳು ಮೃತಪಡುತ್ತವೆ. ಹಾಗಾಗಿ ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಜಾನುವಾರುಗಳಿಗೆ ವಿಮೆ ಮಾಡಿಸಬೇಕು ಎಂದು ಮನ್‌ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ಮನವಿ ಮಾಡಿದರು.

ಮಂಡ್ಯ ಹಾಲು ಒಕ್ಕೂಟದ ಸಹಯೋಗದಲ್ಲಿ ತಾಲೂಕಿನ ರಾಗಿಬೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಗುರುವಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ರಾಸುಗಳ ವಿಮೆ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಬಹಳಷ್ಟು ರೈತರು ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಳ್ಳುವತ್ತ ಮನಸ್ಸು ಮಾಡಿದ್ದಾರೆ. ಹಾಗಾಗಿ ಪ್ರತಿ ಹಳ್ಳಿಯಲ್ಲೂ ಮನ್‌ಮುಲ್ ಒಕ್ಕೂಟದ ಡೇರಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದರು.

ಉತ್ಪಾದಕರು ಹಾಲಿನ ಇಳುವರಿಗಾಗಿ ಲಕ್ಷಾಂತರ ರೂ. ಬಂಡವಾಳ ಹಾಕಿ ಹಸುಗಳನ್ನು ಖರೀದಿಸುತ್ತಿದ್ದಾರೆ. ಇವುಗಳಿಗೆ ವಿಮೆ ಸೌಲಭ್ಯ ಪಡೆಯುವುದರಿಂದ ಅನಾರೋಗ್ಯದಿಂದ ಮೃತಪಟ್ಟರೆ ರೈತರು ಆರ್ಥಿಕ ನಷ್ಟದಿಂದ ಪಾರಾಗಬಹುದು. ಹಾಗಾಗಿ ಪ್ರತಿಯೊಬ್ಬರೂ ಜಾನುವಾರುಗಳಿಗೆ ತಪ್ಪದೆ ವಿಮೆ ಮಾಡಿಸಿಕೊಳ್ಳುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಸ್ತುತ ವಾರ್ಷಿಕ ವಿಮೆ ಯೋಜನೆ ನೋಂದಣಿಗೆ ಚಾಲನೆ ನೀಡಲಾಯಿತು. ನಂತರ ನಿಧನ ಹೊಂದಿದ್ದ ಹಾಲು ಉತ್ಪಾಕರ ಸಂಘದ ಷೇರುದಾರ 7 ಕುಟುಂಬಕ್ಕೆ ಮನ್‌ಮುಲ್ ಒಕ್ಕೂಟದ ವತಿಯಿಂದ ತಲಾ 15 ಸಾವಿರ ರೂ. ಸಹಾಯ ಧನದ ಚೆಕ್ ಮತ್ತು ವಿಮೆ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದ ಜಾನುವಾರುಗಳ ಮಾಲೀಕರಿಗೆ ಚೆಕ್‌ಗಳನ್ನು ವಿತರಣೆ ಮಾಡಲಾಯಿತು.

ಮನ್‌ಮುಲ್ ನಿರ್ದೇಶಕ ಡಿ. ಕೃಷ್ಣೇಗೌಡ, ಡೇರಿ ಅಧ್ಯಕ್ಷ ಕುಮಾರ್, ಮನ್‌ಮುಲ್ ಉಪ ಕಚೇರಿ ಸಹಾಯಕ ವ್ಯವಸ್ಥಾಪಕ ಡಾ.ಸದಾಶಿವ, ಡಾ.ಯೋಗೇಶ್, ಡಾ.ತೇಜಶ್ವಿನಿ, ಡಾ.ಜಯಂತ್, ವಿಸ್ತರಣಾಧಿಕಾರಿ ರವೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಚೌಡಯ್ಯ, ಡೇರಿ ಕಾರ್ಯದರ್ಶಿ ಶಿವಪ್ರಕಾಶ್, ಮುಖಂಡರಾದ ಆರ್.ಬಿ.ಸಿದ್ದಪ್ಪ, ಶಿವರುದ್ರಪ್ಪ, ನಾಗೇಶ್, ಆನಂದರಾಜು ಇದ್ದರು.