ಶ್ರೀರಂಗಪಟ್ಟಣ: ರಾಸುಗಳ ಆರೋಗ್ಯ ಹಾಗೂ ಅರ್ಥಿಕ ಸ್ವಾವಲಂಬನೆ ದೃಷ್ಟಿಯಿಂದ ಪಶುಪಾಲಕರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ಕಾಲು ಬಾಯಿ ಜ್ವರ ನಿಯಂತ್ರಣದ ಲಸಿಕೆ ಹಾಕಿಸಬೇಕು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.
ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ಸೋಮವಾರ ಪಶು ವೈದ್ಯಕೀಯ ಇಲಾಖೆ ಆಯೋಜಿಸಿದ್ದ 8ನೇ ಸುತ್ತಿನ ರಾಷ್ಟ್ರೀಯ ಕಾಲು ಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಕೃಷಿಗಿಂತಲೂ ಪಶುಸಂಗೋಪನೆ ಆರ್ಥಿಕ ದೃಷ್ಟಿಯಿಂದ ಉತ್ತಮ ಕಸುಬು. ರೈತ ಕುಟುಂಬ ನಿರ್ವಹಣೆಗೆ ಹಸು, ಕುರಿ, ಕೋಳಿ, ಮೇಕೆ, ಹಂದಿ ಸಾಕಣೆಯಿಂದ ಉತ್ತಮ ಆದಾಯ ಗಳಿಸಲು ಸಾಧ್ಯ. ಆದರೆ ವೈಜ್ಞಾನಿಕ ಕ್ರಮದಲ್ಲಿ ನಿಯಮ ಪಾಲಿಸಿ ಪಶುಸಂಗೋಪನೆ ನಿರ್ವಹಿಸಿದರೆ ಲಾಭ ನಿಶ್ಚಿತ. ಇನ್ನು ಕಾಲು ಬಾಯಿ ಜ್ವರ ರಾಸುಗಳಿಗೆ ಪಿಡುಗಾಗಿ ಪರಿಣಮಿಸಿತ್ತು. ಆದರೀಗ ಅದನ್ನು ಸಂಪುರ್ಣ ನಿರ್ಮೂಲನೆ ಮಾಡಲು ಸರ್ಕಾರಗಳು ಅಗತ್ಯ ಕಾರ್ಯಕ್ರಮ ರೂಪಿಸಿವೆ. ಹೀಗಾಗಿ ಇದರ ಯಶಸ್ಸಿಗೆ ರೈತಾಪಿ ಜನರು ಹಾಗೂ ಹಾಲು ಉತ್ಪಾದಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪಶು ವೈದ್ಯಕೀಯ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ.ಪ್ರವೀಣ್ ಕುಮಾರ್ ಮಾತನಾಡಿ, ತಾಲೂಕಿನಾದ್ಯಂತ 1 ತಿಂಗಳ ಕಾಲ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, 30 ಸಾವಿರ ರಾಸುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 50 ಮಂದಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮನ್ ಮುಲ್ ನಿರ್ದೇಶಕ ಬಿ.ಬೋರೇಗೌಡ, ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಶಿವಲಿಂಗಯ್ಯ, ಡಾ.ಆನಂದ್, ಡಾ.ರಾಘವೇಂದ್ರ, ಡಾ.ಪ್ರಶಾಂತ್, ಮನ್‌ಮುಲ್ ಉಪವ್ಯವಸ್ಥಾಪಕ ಪ್ರಸಾದ್, ಎಂಪಿಸಿಎಸ್ ಕಾರ್ಯದರ್ಶಿ ಧನಂಜಯ ಇತರರು ಈ ವೇಳೆ ಭಾಗಿಯಾಗಿದ್ದರು.