ಪಾಂಡವಪುರ: ಹೈನುಗಾರಿಕೆ ಮೇಲೆ ಅವಲಂಬಿತರಾಗಿರುವ ರೈತರು ಉದಾಸೀನ ತೋರದೆ ತಮ್ಮ ರಾಸುಗಳಿಗೆ ಗುಂಪು ವಿಮೆ ಮಾಡಿಸಬೇಕು ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.
ತಾಲೂಕಿನ ಕೆರೆತೊಣ್ಣೂರು ಗ್ರಾಮದಲ್ಲಿ ಮನ್‌ಮುಲ್ ವತಿಯಿಂದ ಬುಧವಾರ ಆಯೋಜಿಸಿದ್ದ ರಾಸುಗಳ ಗುಂಪು ವಿಮಾ ಕಾರ್ಯಕ್ರಮಕ್ಕೆ ರಾಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ರಾಸುಗಳು ಆಕಸ್ಮಿಕವಾಗಿ ಮರಣಹೊಂದಿದ್ದರೆ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ರಾಸುಗಳನ್ನು ವಿಮೆ ವ್ಯಾಪ್ತಿಗೆ ತರದಿದ್ದರೆ ಒಕ್ಕೂಟದಿಂದ ಬಿಡಿಗಾಸು ಸಹಾಯವೂ ಸಿಗುವುದಿಲ್ಲ. ಹೀಗಾಗಿ ವಿಮೆ ಅವಶ್ಯಕತೆಯನ್ನು ಅರಿತು ಪ್ರತಿಯೊಬ್ಬರು ವಿಮೆ ಮಾಡಿಸಬೇಕು. ವಿಮೆ ಮಡುವ ಸಂದರ್ಭದಲ್ಲಿ ರಾಸುಗಳ ಕಿವಿಗೆ ಹಾಕುವ ಓಲೆ ಕಳಚಿಕೊಂಡು ಬಿದ್ದು ಹೋದರೆ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಮತ್ತೊಂದು ಓಲೆ ಹಾಕಿಸಿಕೊಳ್ಳಬೇಕು. ಓಲೆ ಕಳೆದುಕೊಂಡರೆ ವಿಮೆ ಪರಿಹಾರದ ಮೊತ್ತ ಸಿಗುವುದಿಲ್ಲ. ಈ ವಿಚಾರದಲ್ಲಿ ಬೇಜವಬ್ದಾರಿ ತೋರಬಾರದು ಎಂದರು.
\2022-23ನೇ ಸಾಲಿನಲ್ಲಿ ತಾಲೂಕಿನಲ್ಲಿ ಒಟ್ಟು 9769 ರಾಸುಗಳಿಗೆ ವಿಮೆ ಮಾಡಿಸಲಾಗಿದೆ. ಇದರಲ್ಲಿ 191 ರಾಸುಗಳು ಮರಣ ಹೊಂದಿದ್ದು, ಈ ಪೈಕಿ 150 ರಾಸುಗಳಿಗೆ 70.79 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇನ್ನೂ 41 ರಾಸುಗಳಿಗೆ ಪರಿಹಾರ ನೀಡಲಾಗುವುದು. ವಿಮೆ ಮೊತ್ತದ ಶೇ. 50 ರಷ್ಟು ಹಣವನ್ನು ಒಕ್ಕೂಟವೇ ಪಾವತಿಸುತ್ತದೆ. ಇನ್ನುಳಿದ ಶೇ.50 ರಷ್ಟು ಹಣವನ್ನು ಫಲಾನುಭವಿಗಳು ಪಾವತಿಸಬೇಕು. ಹಾಲು ಉತ್ಪಾದಕರ ಸಂಘದಲ್ಲಿ ರಾಸು ಅಭಿವೃದ್ಧಿ ನಿಧಿಯ ಹಣವಿದ್ದರೆ ಡೇರಿ ವತಿಯಿಂದ ಶೇ.25 ರಷ್ಟು ಹಣವನ್ನು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡು ವಿಮೆಗೆ ಬಳಸಿಕೊಳ್ಳಬಹುದು. ಇದರಿಂದ ಉತ್ಪಾದಕರಿಗೆ ಹೆಚ್ಚಿನ ಸಹಾಯವಾಗುತ್ತದೆ ಎಂದು ತಿಳಿಸಿದರು.
ಉತ್ಪಾದಕರು ಹಸುಗಳ ನಿರ್ವಹಣೆಗೆ ಹೆಚ್ಚಿನ ಗಮನಕೊಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಹಸುಗಳು ಮರಣ ಹೊಂದಿದ್ದರೆ 10 ಸಾವಿರ ರೂ., ಎಮ್ಮೆಗೆ 5 ಸಾವಿರ ರೂ. ಪರಿಹಾರ ನೀಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಸದ್ಯ ಹಾಲು ಖರೀದಿ ದರ ಇಳಿಕೆಯಾಗಿದ್ದು, ಆ.1ರಿಂದ ಪ್ಯಾಕೆಟ್ ಹಾಲಿನ ದರ 3 ರೂ. ಏರಿಕೆಯಾಗಲಿದೆ. ಆ ಹಣವನ್ನು ರೈತರಿಗೆ ಕೊಡಲು ಒಕ್ಕೂಟದ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹಾಲು ಭರವಸೆ ನೀಡಿದರು.
ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಜಗದೀಶ್, ನಿತಿನ್, ಪಶು ವೈದ್ಯರಾದ ಸಂತೋಷ್, ಏಜಾಜ್ ಪಟೇಲ್, ಡೇರಿ ಅಧ್ಯಕ್ಷ ಕುಮಾರ್ ಇತರರು ಇದ್ದರು.