ಜಿಲ್ಲೆ

ರಾಸಾಯನಿಕ ಕುರಿತ ಎಚ್ಚತ್ತುಕೊಳ್ಳದ ರೈತ ಮುರುಗೇಶಪ್ಪ ವಿಷಾದ

ದಾವಣಗೆರೆ: ಅತಿ ರಾಸಾಯನಿಕ ಬಳಕೆಯಿಂದ ಆಹಾರ ವಿಷವಾಗುತ್ತಿದೆ. ವಿದೇಶಗಳಿಗೆ ಕಳುಹಿಸಿದ್ದ ಖಾರದ ಪುಡಿ ಹಾಗೂ ಆಹಾರ ಧಾನ್ಯಗಳು ವಿಷಕಾರಿ ಎಂಬ ಹಣೆಪಟ್ಟಿ ಹೊತ್ತು ಭಾರತಕ್ಕೆ ವಾಪಸಾಗಿವೆ. ಇಷ್ಟಾದರೂ ರೈತರಿಗೆ ಬುದ್ಧಿ ಬರುತ್ತಿಲ್ಲ ಎಂದು ಪ್ರಗತಿಪರ ಕೃಷಿಕ ಎಚ್.ಬಿ. ಮುರುಗೇಶಪ್ಪ ವಿಷಾದಿಸಿದರು.

ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆ ಮತ್ತು ಕೃಷಿ ನಿರತ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿ ಬದಲಾಗಿ ಆಧುನಿಕ ರಾಸಾಯನಿಕ ಕೃಷಿಗೆ ಮನಸೋತಿದ್ದಾರೆ. ಹೆಚ್ಚು ಇಳುವರಿ ಪಡೆಯುವ ಭರದಲ್ಲಿ ಅಧಿಕ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಈ ವಿಚಾರದಲ್ಲಿ ಕೃಷಿಕರಲ್ಲೇ ಅನಾರೋಗ್ಯಕರ ಸ್ಪರ್ಧೆ ಹೆಚ್ಚಿ, ಮಣ್ಣನ್ನು ಸಾಯಿಸಲು ಪೈಪೋಟಿ ನಡೆಸಿದ್ದಾರೆ. ಇದರಿಂದ ಮಣ್ಣು ತನ್ನ ಸತ್ವ ಕಳೆದುಕೊಳ್ಳುತ್ತಿದೆ ಎಂದರು.

ಸಮಾರಂಭದಲ್ಲಿ ನೈಸರ್ಗಿಕ ಕೃಷಿಕ, ಮಲ್ಲನಾಯಕನಹಳ್ಳಿಯ ರಾಘವ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಯೋಜನಾ ಅಭಿಯಂತರ ಅಪ್ಪನಗೌಡ ಗೌಡರ್, ತರಳಬಾಳು ಕೆವಿಕೆ ಮಣ್ಣು ವಿಜ್ಞಾನ ವಿಷಯ ತಜ್ಞ ಎಚ್.ಎಂ. ಸಣ್ಣಗೌಡರ್ ಉಪನ್ಯಾಸ ನೀಡಿದರು.

ಪ್ರಗತಿಪರ ಕೃಷಿಕರಾದ ಬಿ. ಉಮೇಶ್, ಸಿ.ಟಿ. ಚಂದ್ರಪ್ಪ, ಇಟಗಿ ಶಿವಣ್ಣ, ಆತ್ಮ ಯೋಜನೆ ಉಪ ಯೋಜನಾಕಾರಿ ಜಿ.ಎಂ. ಚಂದ್ರಶೇಖರಪ್ಪ ಕೆವಿಕೆ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ, ತೋಟಗಾರಿಕೆ ವಿಷಯ ತಜ್ಞ ಎಂ.ಜಿ. ಬಸವನಗೌಡ, ಡಾ.ಟಿ.ಜಿ. ಅವಿನಾಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ಸಾವಯವ ಧಾನ್ಯ, ಹಣ್ಣು, ತರಕಾರಿಗಳನ್ನು ಪ್ರದರ್ಶಿಸಲಾಯಿತು.