ಜಿಲ್ಲೆ

ರಾಷ್ಟ್ರೀಯತೆಯ ಕಲ್ಪನೆ ರಾಮಾಯಣದಲ್ಲಿದೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ನಮ್ಮ ಸನಾತನ ಧರ್ಮವೇ ರಾಷ್ಟ್ರೀಯತೆ ಎಂದು ಯೋಗಿ ಅರವಿಂದ ಘೊಷರು ಸಾರಿದ್ದರು. ರಾಷ್ಟ್ರ, ರಾಷ್ಟ್ರೀಯತೆ ಕಲ್ಪನೆ ಉಪನಿಷತ್, ವೇದ, ರಾಮಾಯಣಗಳಲ್ಲಿದೆ ಎಂದು ವಿಮರ್ಶಕ ಡಾ.ಜಿ.ಬಿ. ಹರೀಶ ಹೇಳಿದರು.

ಲೋಕಹಿತ ಟ್ರಸ್ಟ್ ವತಿಯಿಂದ ಇಲ್ಲಿನ ಗೋಕುಲ ರಸ್ತೆಯ ಕೇಶವ ಕುಂಜದಲ್ಲಿ ಭಾನುವಾರ ಏರ್ಪಡಿಸಿದ್ದ ಕಾ.ಶ್ರೀ. ನಾಗರಾಜ ಅವರ ‘ಮಂತ್ರದೃಷ್ಟ ಅರವಿಂದ ಘೊಷ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಶ್ರಮ ಆರಂಭವಾದ ಕೆಲವೇ ದಿನಗಳಲ್ಲಿ ದೇಶದ ವಿವಿಧೆಡೆ ಶಾಖೆಗಳು ಆರಂಭವಾಗುತ್ತವೆ. ಆದರೆ, ಅರವಿಂದ ಆಶ್ರಮ, ರಮಣ ಮಹರ್ಷಿ ಆಶ್ರಮ ಹಾಗಲ್ಲ. ಪಾಂಡಿಚೇರಿಯಲ್ಲಿ ಮಾತ್ರ ಇದೆ. ಅನೇಕ ಋಷಿಗಳು ಮಂತ್ರಗಳನ್ನು ನೀಡಿದ್ದಾರೆ. ಆದರೂ ನಂತರದ ಕಾಲಮಾನದಲ್ಲಿ ಮಹಾಕಾವ್ಯ, ಕಥೆಯ ಮೂಲಕ ಅರವಿಂದರು ಆಧ್ಯಾತ್ಮದ ಮಂತ್ರ ನೀಡಿದ್ದರು ಎಂದರು.

ದೈವ ಸಂಕಲ್ಪ ಕಾಲ ಕಾಲಕ್ಕೆ ಸುರಳಿಯಂತೆ ಬಿಚ್ಚಿಕೊಳ್ಳುತ್ತದೆ. ವಿವೇಕಾನಂದರು ಭೌತಿಕವಾಗಿ ಮಾಡಲಾಗದ ಕೆಲಸವನ್ನು ಅರವಿಂದರು ಮುಂದುವರಿಸಿದರು. ವೇದಗಳ ರಹಸ್ಯ ಜಗತ್ತಿಗೆ ತಿಳಿಸಿದರು. ಭಾರತದ ಸಮಸ್ಯೆಗಳಿಗೆ ಪರಿಹಾರ ವೇದದಲ್ಲಿದೆ. ಸನಾತನ ಧರ್ಮದಲ್ಲಿದೆ ಎಂದು ಭಾವಿಸಿದ್ದರು. ರಾಜಕೀಯ ಆಧಾರಿತವಾದ ರಾಷ್ಟ್ರೀಯತೆಯಲ್ಲ. ಸಂಸ್ಕೃತಿ, ಆಚಾರ-ವಿಚಾರ ಆಧಾರಿತ ಸಂಸ್ಕೃತಿ ಎಂದಿದ್ದಾರೆ ಎಂದರು.

ದೇಶ-ಧರ್ಮ ಬೇರೆ ಅಲ್ಲ. ಯೋಗದ ಭೂಮಿಕೆಯಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಜೀವನ ಕುರಿತು ತಿಳಿಸಿದವರು ಅರವಿಂದರು. ಜಗತ್ತಿನಲ್ಲಿ ಪರಿವರ್ತನೆಯಾಗಬೇಕು ಎಂದು ಬಯಸಿದ್ದ ಅವರು, ಸತ್ಯವೊಂದನ್ನು ಬಿಟ್ಟು ಇನ್ಯಾವುದಕ್ಕೂ ಗುಲಾಮನಾಗಬೇಡ ಎಂದಿದ್ದಾರೆ ಎಂದು ವಿವರಿಸಿದರು.

ಆರ್​ಎಸ್​ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಗೀರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಕಾ.ಶ್ರೀ. ನಾಗರಾಜ ಅವರು ಸಂಘದ ಕಾರ್ಯದಲ್ಲಿ ತೊಡಗಿದ್ದರು. ಅವರಲ್ಲಿ ಲೇಖಕ ಅಡಗಿದ್ದ. ಯಾವುದೇ ಕಾಲ್ಪನಿಕ ಬರಹಕ್ಕೆ ಅವಕಾಶ ನೀಡದೆ, ದೇಶದ ಮಹಾನ್ ವ್ಯಕ್ತಿಗಳ, ಅವರ ಕಾರ್ಯದ ಕುರಿತು ಜನರಿಗೆ ಪರಿಚಯಿಸುತ್ತಿದ್ದಾರೆ. ಹತ್ತಾರು ಗ್ರಂಥಗಳನ್ನು ರಚಿಸಿ ಕನ್ನಡಕ್ಕೆ ನೀಡಿದ್ದಾರೆ. ತೊಂಬತ್ತರ ಈ ಇಳಿವಯಸ್ಸಲ್ಲಿಯೂ ಅವರ ಲೇಖನ ಕಾರ್ಯ ನಿಂತಿಲ್ಲ ಎಂದರು.

ಲೇಖಕ, ಆರ್​ಎಸ್​ಎಸ್ ಹಿರಿಯ ಪ್ರಚಾರಕ ಕಾ.ಶ್ರೀ ನಾಗರಾಜ ಇದ್ದರು.