ಹಾಸನ: ಕುಂಟುತ್ತಾ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ-75 ಹಾಸನ-ಸಕಲೇಶಪುರ-ಮಾರನಹಳ್ಳಿವರೆಗಿನ ಚತುಷ್ಪಥ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಸದ ಶ್ರೇಯಸ್ ಪಟೇಲ್, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರ್ ಅವರನ್ನು ದೆಹಲಿಯಲ್ಲಿ ಗುರುವಾರ ಭೇಟಿಯಾಗಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಭೂಕುಸಿತ ಉಂಟಾಗಿ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಸಕಲೇಶಪುರ ತಾಲೂಕಿನ ಶಿರಾಡಿಘಾಟ್ ಪ್ರದೇಶದಲ್ಲಿ ಭೂಕುಸಿತದಿಂದಾಗಿ ಮಣ್ಣಿನಲ್ಲಿ ವಾಹನಗಳು ಸಿಕ್ಕಿಹಾಕಿಕೊಂಡು ಅವಾಂತರವೇ ಸೃಷ್ಟಿಯಾಗಿತ್ತು. ಅಲ್ಲದೇ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ, ರಸ್ತೆ ವಿಸ್ತರಣೆಗಾಗಿ ಅವೈಜ್ಞಾನಿಕಾಗಿ ಗುಡ್ಡಗಳನ್ನು ಕತ್ತರಿಸಿರುವುರಿಂದ ಭೂಕುಸಿತಕ್ಕೆ ಕಾರಣವಾಗಿದೆ ಎಂದು ಸಚಿವರ ಗಮನ ಸೆಳೆದಿದ್ದಾರೆ.
2017 ರಲ್ಲಿ ಪ್ರಾರಂಭಿಸಲಾದ 45 ಕಿ.ಮೀ. ಹಾಸನ-ಮಾರನಹಳ್ಳಿ ಮಾರ್ಗದ ಚತುಷ್ಪಥ ಕಾಮಗಾರಿ ಅಪೂರ್ಣವಾಗಿದೆ. ಆದರೆ, ಕಾಮಗಾರಿ ಗುಣಮಟ್ಟವಿಲ್ಲದೆ ಭಾರೀ ಮಳೆಯಿಂದ ರಸ್ತೆಯಲ್ಲಿ ಹೊಂಡಗಳು ನಿರ್ಮಣವಾಗಿವೆ. ಪ್ರತಿ ಮಳೆಗಾಲದಲ್ಲಿ ರಸ್ತೆ ಬಳಕೆದಾರರಿಗೆ ದುಃಸ್ವಪ್ನವಾಗಿ ಪರಿಣಮಿಸುತ್ತದೆ. ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಕಾಮಗಾರಿ ಕಳಪೆಯಾಗಿರುವುದರಿಂದ ಅಪಾಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಗಮನ ಹರಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವರು, ಈ ಬಗ್ಗೆ ಪರಿಶೀಲಿಸಿ, ಶೀಘ್ರದಲ್ಲೇ ಕಾಮಗಾರಿ ಮುಗಿಸುವುದಾಗಿದೆ ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನಡೆಯುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಗೌಡಗೆರೆ, ಬಿಟ್ಟಗೌಡನಹಳ್ಳಿ, ಈಶ್ವರಹಳ್ಳಿ ಕೂಡಿಗೆ, ಆದಿಹಳ್ಳಿ ಕ್ರಾಸ್ ಅಂಡರ್‌ಪಾಸ್ ನಿರ್ಮಾಣ ಮಾಡಬೇಕು. ಈ ಭಾಗದಲ್ಲಿ ಅಗತ್ಯವಾಗಿ ಅಂಡರ್‌ಪಾಸ್ ನಿರ್ಮಾಣವಾದೆ ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದು ಗಮನ ಸೆಳೆದಿದ್ದಾರೆ. ಇದಲ್ಲದೆ ರಾಷ್ಟ್ರೀಯ ಹೆದ್ದಾರಿ-373 ಚಿಕ್ಕಮಗಳೂರು-ಬೇಲೂರು ರಸ್ತೆ ವಿಸ್ತರಣೆಗೆ ಮನವಿ ಮಾಡಿದ್ದಾರೆ. ಶ್ರೀರಂಗಪಟ್ಟಣ-ಕೆ.ಆರ್.ಪೇಟೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ-07 ಅನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಕೋರಿದ್ದಾರೆ.