ಜಿಲ್ಲೆ

ರಾಷ್ಟ್ರೀಯ ಸಮಾಜ ಪಕ್ಷ ಸ್ವರಾಜ್ಯ ಯಾತ್ರಾ ಮಿಷನ್ 26ಕ್ಕೆ

ಕಲಬುರಗಿ: ರಾಷ್ಟ್ರೀಯ ಸಮಾಜ ಪಕ್ಷದ (ಆರ್‌ಎಸ್‌ಪಿ) ರಾಜ್ಯ ಘಟಕದಿಂದ ಆ.26ರಂದು ಜನಸ್ವರಾಜ್ಯ ಯಾತ್ರಾ ಮಿಷನ್-೨೦೨೪ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್ ತಿಳಿಸಿದರು.
ಅಂದು ಬೆಳಗ್ಗೆ ೧೧.೩೦ಕ್ಕೆ ನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಕಲಬುರಗಿಯಿಂದ ೧೦೦೦ಕ್ಕೂ ಅಧಿಕ ಜನ ಯಾತ್ರೆಗೆ ತೆರಳಲಿದ್ದಾರೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಸ್ವರಾಜ್ಯ ನಿರ್ಮಾಣಕ್ಕೆ ಕಲಬುರಗಿ ಮೂಲಕ ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ಹಾಗೂ ನಂದಗಡ (ಬೆಳಗಾವಿ)ವರೆಗೆ ನಡೆಯುವ ಯಾತ್ರೆಯುದ್ದಕ್ಕೂ ಮಾರ್ಗಮಧ್ಯದ ತಾಲೂಕು ಕೇಂದ್ರಗಳಲ್ಲಿ ಬಹಿರಂಗ ಸಭೆ ನಡೆಯಲಿದೆ. ೨೯ರಂದು ಪುಣೆಯಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ೨ ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದ ಒಬಿಸಿ, ಎಂಬಿಸಿ ಸಮೀಕ್ಷಾ ವರದಿ ಬಿಡುಗಡೆಗೆ ಶ್ವೇತಪತ್ರ ಹೊರಡಿಸಬೇಕು. ಆಶ್ರಯ ಮನೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೌಶಲ ತರಬೇತಿ ಜತೆಗೆ ಸರಳ ಸಾಲ ಸೌಲಭ್ಯ ಒದಗಿಸಬೇಕು. ೩೭೧(ಜೆ) ವಿಧಿ ಅನ್ವಯ ಕಲ್ಯಾಣ ಕರ್ನಾಟಕದ ಒಬಿಸಿ ಮತ್ತು ಎಂಬಿಸಿ ರೋಸ್ಟರ್ ಪದ್ಧತಿಯಲ್ಲಿ ಅನ್ಯಾಯವಾಗಿದ್ದು, ತಕ್ಷಣ ಸರಿಪಡಿಸಬೇಕು. ಕೆಕೆಆರ್‌ಡಿಬಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೂ ಸಮರ್ಪಕ ಅನುದಾನ ನೀಡಬೇಕು. ಈ ಭಾಗದ ಯುವಕರಿಗೆ ಉದ್ಯೋಗ, ಕೌಶಲ ತರಬೇತಿ, ಮಹಿಳೆಯರಿಗೆ ಶೌಚಗೃಹ ಕಟ್ಟಡ ನಿರ್ಮಾಣಕ್ಕೆ ಸಮರ್ಪಕ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಎಸ್.ಎ. ಪೂಜಾರಿ, ಧರ್ಮಣ್ಣ , ಶರಣಬಸಪ್ಪ ದೊಡ್ಡಮನಿ, ದೇವೇಂದ್ರಪ್ಪ ಕ್ಯಾಶಪಳ್ಳಿ, ಭೀಮಣ್ಣ ಕಟ್ಟಿಮನಿ, ಶ್ರೀಮಂತ ಮಾವನೂರ, ಮಹಾಂತಪ್ಪ ಜೇವರ್ಗಿ ಇತರರಿದ್ದರು.