ಬೀದರ್: ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ.9ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮಪ್ಪ ಕನಕಟ್ಟೆ ಕೋರಿದರು.
ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಆಸ್ತಿ ಪಾಲು, ಜೀವನಾಂಶ, ಚೆಕ್ ಬೌನ್ಸ್, ವಿದ್ಯುತ್, ಕಂದಾಯ, ಬ್ಯಾಂಕ್, ವಿವಾಹ ವಿಚ್ಛೇದನಕ್ಕೆ ಸಂಬಂಸಿದ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅದಾಲತ್ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ಜು.8ರಂದು ಹಮ್ಮಿಕೊಂಡಿದ್ದ ಲೋಕ ಅದಾಲತ್ನಲ್ಲಿ ಜಿಲ್ಲೆಯಲ್ಲಿ 23,340 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿದ್ದು. 10,36,52,476 ರೂ. ಪರಿಹಾರ ಮತ್ತು ವಸೂಲಾತಿ ಮೂಲಕ ಕಕ್ಷಿದಾರರಿಗೆ ಹಣ ಕೊಡಿಸಲಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇರುವ 23,340 ಪ್ರಕರಣಗಳಲ್ಲಿ 17,521 ಮತ್ತು 12,963 ವ್ಯಾಜಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 111 ಬ್ಯಾಂಕ್ ವಸೂಲಾತಿ ಪ್ರಕರಣ ಇತ್ಯರ್ಥಗೊಳಿಸಿ 1.05 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದರು.
ಸೆ.9ರಂದು ನಡೆಯುವ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸಲು ಯೋಜನೆ ರೂಪಿಸಲಾಗಿದೆ. ಆ.1ರವರೆಗೆ ಜಿಲ್ಲೆಯಲ್ಲಿ 26,322 ಪ್ರಕರಣ ಬಾಕಿ ಇವೆ ಎಂಬ ಮಾಹಿತಿ ಇದೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ಈ ಬಾರಿಯ ಅದಾಲತ್ ನಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿದರು.
ಲೋಕ ಅದಾಲತ್ ನಲ್ಲಿ ರಾಜಿ ಸಂಧಾನ ಮಾಡಿಕೊಳ್ಳುವ ಕಕ್ಷಿದಾರರಿಗೆ ನ್ಯಾಯಾಲಯದ ಶುಲ್ಕ ವಾಪಸ್ ಸಿಗಲಿದೆ ಹಾಗೂ ಅದಾಲತ್ ನಲ್ಲಿ ನಿರ್ಣಯವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಇಲ್ಲಿ ದ್ವೇಷ ಮರೆತು ಪ್ರಕರಣಗಳನ್ನು ಒಳ್ಳೆಯ ಬಾಂಧವ್ಯದೊಂದಿಗೆ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.