ಜಿಲ್ಲೆ

ರಾಷ್ಟ್ರೀಯ ಲೋಕ ಅದಾಲತ್ ಸೆ.14

ಎಸ್.ಎರ್ರಿಸ್ವಾಮಿ

ಬಳ್ಳಾರಿ : ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾನೂನುನ ಸೇವೆಗಳ ಪ್ರಾಧಿಕಾರದಿಂದ ಸೆ.14 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶೆ ಕೆ.ಜಿ. ಶಾಂತಿ ಹೇಳಿದರು.
ನಗರದ ನೂತನ ನ್ಯಾಯಾಲಯದ ಸಂಕೀರ್ಣದ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಬಾಕಿ ಇರುವ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ಚೆಕ್ ಬೌನ್ಸ್ , ಬ್ಯಾಂಕ್, ಮೋಟಾರು ವಾಹನ ಅಪಘಾತ ಪರಿಹಾರ , ವೈವಾಹಿಕ, ಕೌಟುಂಬಿಕ, ಸಿವಿಲ್ ಸೇರಿದಂತೆ ವಿವಿಧ ರಾಜಿಯಾಗಬಹುದಾದ ಪ್ರಕರಣಗಳನ್ನು ಮೆಗಾ ಲೊಕ ಅದಾಲತ್‌ನಲ್ಲಿ ಬಗೆಹರಿಸಲಾಗುವುದು ಎಂದರು. ಅವಳಿ ಜಿಲ್ಲೆಯ 31 ನ್ಯಾಯಾಲಯಗಳಲ್ಲಿ 59,434 ಪ್ರಕರಣಗಳು ಬಾಕಿಯಿದ್ದು, 4,109 ಪ್ರಕರಣಗಳು ರಾಜಿ ಸಂಧಾನ ಮೂಲಕ ಬಗೆಹರಿಸಬಹುದು ಎಂದು ಗುರುತಿಸಲಾಗಿದೆ. ಅವುಗಳಲ್ಲಿ 905 ಪ್ರಕರಣಗಳು ರಾಜಿ ಸಂಧಾನದ ಮೂಲಕ ವಿಮುಕ್ತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಳೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, 1,13,540 ವ್ಯಾಜ್ಯಪೂರ್ವ ಮತ್ತು 11,902 ಬಾಕಿ ಪ್ರಕರಣ ಸೇರಿದಂತೆ ಒಟ್ಟು 1,25,442 ಪ್ರಕರಣಗಳಲ್ಲಿ 74 ಕೋಟಿ ರೂ. ಪರಿಹಾರ ಒದಗಿಸಲಾಗಿದೆ ಎಂದು ಹೇಳಿದರು. ಇದೇ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಎನ್.ಹೊಸಮನೆ ಇದ್ದರು.