ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾನೂನು ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಜನರು ಕಾನೂನಿಗೆ ಹೆದರಬೇಕಿಲ್ಲ. ಆದರೆ ಗೌರವಿಸಿ ಅದರಂತೆ ನಡೆಯಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಜಿ. ಶಾಂತಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 11ರಂದು ರಾಷ್ಟ್ರೀಯ ಲೋಕ ಅದಾಲತ್ ಏರ್ಪಡಿಸಿದ್ದು, ರಾಜಿಗಾಗಿ 28,630 ಪೂರ್ವವ್ಯಾಜ್ಯ ಪ್ರಕರಣಗಳನ್ನು ಗುರುತಿಸಲಾಗಿದೆ. ರಾಜಿ ಆಗಬಹುದಾದ ಪ್ರಕರಣಗಳಲ್ಲಿ ಕಕ್ಷಿದಾರರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನು ನ್ಯಾಯಾಧೀಶರು, ನ್ಯಾಯವಾದಿಗಳು ಮತ್ತು ಪ್ರಾಧಿಕಾರದ ಸಿಬ್ಬಂದಿ ಮಾಡುತ್ತಿದ್ದಾರೆ ಎಂದರು.
2022ರ ಜನವರಿಯಿಂದ ಡಿಸೆಂಬರ್‌ವರೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್‌ಗಳಲ್ಲಿ ಪೂರ್ವವ್ಯಾಜ್ಯ ಪ್ರಕರಣ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಒಟ್ಟು 2,08,630 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇವುಗಳಲ್ಲಿ ಕ್ರಿಮಿನಲ್ ಪ್ರಕರಣ, ಚೆಕ್‌ಬೌನ್ಸ್, ಹಣ ವಸೂಲಾತಿ, ಅಪಘಾತ ಪರಿಹಾರ, ಆಸ್ತಿ ವಿಭಾಗ ದಾವೆ, ಕೌಟುಂಬಿಕ ಮತ್ತು ಜೀವನಾಂಶ ಪ್ರಕರಣಗಳೂ ಸೇರಿವೆ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಬಿ. ವೀರಪ್ಪ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವವನ್ನು ಸರ್ಕಾರ ಅನುಮೋದಿಸಿದ್ದು, ಫೆ. 1ರಿಂದ 11ರವರೆಗೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ. ಜಿಲ್ಲೆಯ ಇಂತಹ ಪ್ರಕರಣ ಹೊಂದಿರುವ ವಾಹನ ಸವಾರರು ಮತ್ತು ಮಾಲೀಕರು ದಂಡ ಪಾವತಿಸಿ ಪ್ರಕರಣದಿಂದ ಮುಕ್ತರಾಗಬೇಕು. ಮುಂದಿನ ದಿನಗಳಲ್ಲಿ ಮತ್ತೆ ನಿಯಮ ಉಲ್ಲಂಘಿಸಿ, ಅಪರಾಧ ಮಾಡದಂತೆ ತಿಳಿಸಿದರು.
ಉಪ ಪೊಲೀಸ್ ಆಯುಕ್ತ ಡಾ.ಗೋಪಾಲ ಬ್ಯಾಕೋಡ ಮಾತನಾಡಿ, 2019 ರಿಂದ 2022ರವರೆಗೆ ಮಹಾನಗರ ವ್ಯಾಪ್ತಿಯಲ್ಲಿ ಒಟ್ಟು 3,25,406 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 15,91,64,550 ರೂ. ದಂಡ ಬಾಕಿ ಇದೆ. ದಂಡ ರಿಯಾಯಿತಿ ಆದೇಶದಿಂದ ಸುಮಾರು 7.50 ರೂ. ಗಿಂತ ಹೆಚ್ಚು ಮೊತ್ತ ಜಮೆ ಆಗುತ್ತದೆ. ಕಳೆದ ಎರಡು ದಿನಗಳಿಂದ ಅನೇಕ ಜನ ದಂಡ ಪಾವತಿಸುತ್ತಿದ್ದಾರೆ ಎಂದರು.
ದಂಡದ ಮೊತ್ತವನ್ನು ಹು-ಧಾ ಒನ್, ಕರ್ನಾಟಕ ಒನ್, ಅವಳಿ ನಗರದ ಸಂಚಾರಿ ಪೊಲೀಸ್ ಠಾಣೆ ಹಾಗೂ ಪಿಡಿಎ ಮಷೀನ್ ಹೊಂದಿರುವ ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ ಬಳಿಯೂ ಭರಿಸಬಹುದಾಗಿದೆ. ಫೆ.11ರ ನಂತರ ಬಾಕಿದಾರರು ದಂಡದ ಪೂರ್ಣ ಮೊತ್ತ ತುಂಬಬೇಕಾಗುತ್ತದೆ. ಹೀಗಾಗಿ ನಿಗದಿತ ಅವಧಿಯಲ್ಲಿ ಡಂಡ ಪಾವತಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತ ಸಿ.ಎಂ., ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಪೊಲೀಸ್ ಪಾಟೀಲ, ಇತರರು ಇದ್ದರು.