ಹಾಸನ: ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ರಸ್ತೆ ನಿಯಮ ಪಾಲಿಸಿದರೆ ಅಪಘಾತ ಪ್ರಕರಣಗಳನ್ನು ತಡೆಗಟ್ಟಬಹುದೆಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ನಾಯ್ಡು ಅವರು ಸಲಹೆ ನೀಡಿದರು.
ನಗರದ ಡೇರಿ ವೃತ್ತದಲ್ಲಿ ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸಂಚಾರಿ ನಿಯಮಗಳ ಅರಿವು ಹಾಗು ಹೆಲ್ಮೆಟ್ ಜಾಗೃತಿ ಬೈಕ್ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲು ರಸ್ತೆಗಳು ಸರಿಯಿಲ್ಲದ ಕಾರಣಕ್ಕೆ ಅಪಘಾತ ಸಂಭವಿಸುತ್ತಿದ್ದವು. ಆದರೆ ಈಗ ಸುಸಜ್ಜಿತ ರಸ್ತೆಗಳಿದ್ದರೂ ವಾಹನ ಚಾಲಕರ ಬೇಜವಾಬ್ದಾರಿಯಿಂದ ಅವಘಡ ಸಂಭವಿಸುತ್ತಿವೆ. ಹೆಲ್ಮೆಟ್ ಇಲ್ಲದೆ ಪ್ರಯಾಣ, ವೀಲಿಂಗ್‌ನಂತಹ ಸಾಹಸಕ್ಕೆ ಯುವಕರು ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಹೆಲ್ಮೆಟ್ ಹಾಕಿ ಬೈಕ್ ಓಡಿಸಿದರೆ ಅಪಘಾತಗಳ ಪ್ರಮಾಣ ನಿಯಂತ್ರಿಸಬಹುದು. ಒಂದು ವೇಳೆ ಅಪಘಾತವಾದರೂ ಹೆಲ್ಮೆಟ್ ಹಾಕಿದ್ದರೆ ತಲೆಗೆ ಬೀಳಬಹುದಾದ ಏಟಿನಿಂದ ತಪ್ಪಿಸಿಕೊಳ್ಳಬಹುದು ಎಂದರು.
ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶಾಮ್, ಡಿವೈಎಸ್ಪಿ ಮುರುಳೀಧರ್ ಹಾಗು ಸಂಚಾರಿ ಠಾಣಾ ಸಬ್ ಇನ್ಸಪೆಕ್ಟರ್‌ಗಳು ಹಾಜರಿದ್ದರು.