ವಿಕ್ರಮ ನಾಡಿಗೇರ ಧಾರವಾಡ
ಜಿಲ್ಲೆಯಲ್ಲಿ 5 ದಿನಗಳ ಕಾಲ ನಡೆಯುವ 26ನೇ ರಾಷ್ಟ್ರೀಯ ಯುವ ಜನೋತ್ಸವದಿಂದ ನಗರದಲ್ಲಿ ಸಂಭ್ರಮ ಮನೆ ಮಾಡಿದೆ. ಯುವ ಜನೋತ್ಸವದ ತಯಾರಿ ಜೋರಾಗಿದ್ದು, ಎಲ್ಲ ಹಂತದ ಸಿದ್ಧತೆಗಳಿಗೆ ಅಂತಿಮ ಸ್ಪರ್ಷ ನೀಡಲು ಕೆಲಸ ನಡೆಯುತ್ತಿದೆ.
ಉತ್ತರ ಕರ್ನಾಟಕದ ಐತಿಹಾಸಿಕ ನಗರವಾದ ಧಾರವಾಡದಲ್ಲಿ ಜ. 12ರಿಂದ 16ರವರೆಗೆ ನಡೆಯುವ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ದೇಶದ 8 ಕೇಂದ್ರಾಡಳಿತ ಪ್ರದೇಶ, 28 ರಾಜ್ಯಗಳಿಂದ ಯುವ ಪ್ರತಿಭೆಗಳು, ಪ್ರತಿಭಾವಂತ ಕಲಾವಿದರು ಮತ್ತು ರಾಷ್ಟ್ರ, ಅಂತಾರಾಷ್ಟ್ರ ಖ್ಯಾತಿಯ ಕಲಾವಿದರು ಆಗಮಿಸಲಿದ್ದಾರೆ.
ಯವ ಜನೋತ್ಸವದಲ್ಲಿ ಭಾಗವಹಿಸುವ ರಾಜ್ಯಗಳ ಪೈಕಿ ಮೊದಲ ತಂಡವಾಗಿ ಜಮ್ಮು ಕಾಶ್ಮೀರ ತಂಡ ಈಗಾಗಲೇ ನಗರಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧತೆ ಕಾರ್ಯ ವೇಗ ಪಡೆದಿದೆ. ಈಗಾಗಲೇ ಆರಂಭವಾದ ನಗರ ಸೌಂದರ್ಯೀಕರಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ವೇದಿಕೆಯಾದ ಕರ್ನಾಟಕ ಕಾಲೇಜು ಮೈದಾನದಲ್ಲಿನ ವೇದಿಕೆ, ಮಳಿಗೆಗಳ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ. ಕರ್ನಾಟಕದ ಭವ್ಯ ಪರಂಪರೆ ಮತ್ತು ಉತ್ತರಕರ್ನಾಟಕದ ವಿಶೇಷತೆ ಪರಿಚಯಿಸುವ ದೃಷ್ಟಿಯಿಂದ ಜಿಲ್ಲಾಡಳಿತ ಅತಿಥಿಗಳನ್ನು ಸ್ವಾಗತಿಸಲು ವಿಶೇಷ ಸಿದ್ಧತೆ ಮಾಡಿಕೊಂಡಿದೆ.
5 ದಿನಗಳ ಕಾಲ ಬೆಳಗ್ಗೆ ಯೋಗ, ಧ್ಯಾನದಿಂದ ಆರಂಭವಾಗುವ ಚಟುವಟಿಕೆಗಳು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಗಲಿವೆ. ಯುವ ಸಮಿತ್, ಯುವ ಕಲಾವಿದರ ಶಿಬಿರ, ಫುಡ್ ಫೆಸ್ಟಿವಲ್, ಯುವಕೃತಿ, ಸಾಹಸ ಶಿಬಿರ, ಸ್ಥಳೀಯ ಕ್ರೀಡೆಗಳು ಮತ್ತು ಸಮರ ಕಲೆಗಳು, ಜಾನಪದ ನೃತ್ಯ, ಜಾನಪದ ಸಂಗೀತ ಸೇರಿ ವಿವಿಧ ವಿಭಾಗಗಳಲ್ಲಿ ಯುವಕು ಪ್ರತಿಭೆ ಪ್ರದರ್ಶಿಸಲು ಅವಕಾಶ ಇದೆ.
ಯುವಕರು ತಾವು ಆಯ್ಕೆ ಮಾಡಿದ ಕ್ಷೇತ್ರಗಳಲ್ಲಿನ ಗಣ್ಯರು ಹಾಗೂ ಆಯಾ ಕ್ಷೇತ್ರದ ತಜ್ಞರೊಂದಿಗೆ ಸಂವಾದ ನಡೆಸಿ ತಮ್ಮ ಹೊಸ ಹೊಸ ಆಲೋಚನೆಗಳನ್ನು ಹೊರಹಾಕಲು ‘ಯುತ್ ಸಮಿತ್’ ಇದ್ದರೆ, ಯುವ ಕುಶಲಕರ್ಮಿಗಳ ಸಿದ್ಧಪಡಿಸಿರುವ ಕರಕುಶಲ ಉತ್ಪನ್ನ ಮತ್ತು ಕರಕುಶಲ ಕೌಶಲ ಪ್ರದರ್ಶನಕ್ಕೆ ‘ಯುವ ಕೃತಿ’ ಮೇಳದಲ್ಲಿ ಅವಕಾಶ ಸಿಗಲಿದೆ. ಹೀಗೆ ಒಟ್ಟಾರೆ ಯುವಕರಲ್ಲಿನ ಪ್ರತಿಭೆ ಗುರುತಿಸಲು ಯುವ ಜನೋತ್ಸವ ಒಂದು ವೇದಿಕೆ ಕಲ್ಪಿಸಿದೆ.
ಕೆಸಿಡಿಯ ಒಂದು ಮೈದಾನದಲ್ಲಿ ಮುಖ್ಯ ವೇದಿಕೆ, ಕೆಲ ಮಳಿಗೆಗಳನ್ನು ನಿರ್ಮಿಸುತ್ತಿದ್ದರೆ, ಇನ್ನೊಂದು ಬದಿಯ ಮೈದಾನದಲ್ಲಿ ಯುವಕೃತಿ ಮೇಳಕ್ಕಾಗಿ ಸುಮಾರು 150 ಮಳಿಗೆಗಳು ಹಾಗೂ ಸುಮಾರು 45 ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳ ಜತೆಗೆ ವಸತಿ ಸೌಲಭ್ಯ ಕಲ್ಪಿಸಿರುವ ಕೃವಿವಿ ಆವರಣ ಸೇರಿ ಇತರ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಸಹ ಸಿದ್ಧತೆಗಳು ಸಾಗಿವೆ.
----ಬಾಕ್ಸ್----
ಏನಿದೆ ಕಿಟ್‌ನಲ್ಲಿ
ಸುಮಾರು 7,500 ಸ್ಪರ್ಧಾಳುಗಳು, ಅತಿಥಿಗಳಿಗೆ ನೀಡಲು ವಿಶೇಷ ನೋಂದಣಿ ಕಿಟ್ ರೂಪಿಸಲಾಗಿದೆ. ವಿಶೇಷವಾಗಿ ಹಸಿರು ಯುವ ಜನೋತ್ಸವವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ನೋಂದಣಿ ಕಿಟ್ ವಸ್ತುಗಳು ಮರುಬಳಕೆ ವಸ್ತುಗಳಾಗಿವೆ. ಕಿಟ್‌ನಲ್ಲಿ ಗುರುತಿನ ಚೀಟಿ, ಸ್ಟೀಲ್ ವಾಟರ್ ಬಾಟಲ್, ಯೋಗಾ ಮ್ಯಾಟ್, ಟ್ರಾೃಕ್‌ಸೂಟ್, ಉತ್ಸವ ಮಾಹಿತಿ ಇರುವ ಇವೆಂಟ್ ಮೆನ್ಯೂ, ಕರ್ನಾಟಕ ಹಾಗೂ ಧಾರವಾಡ ಜಿಲ್ಲೆ ಪ್ರವಾಸಿ ತಾಣಗಳ ಮಾಹಿತಿ ಪುಸ್ತಕ, ಅರವಿಂದೊ ಟ್ರಸ್ಟ್‌ನ ಯೂಥ್ ಆಫ್ ಇಂಡಿಯಾ ಪುಸ್ತಕ ಹಾಗೂ ಧಾರವಾಡ ನೆನಪಿಸುವ ಪೇಢಾ ಬಾಕ್ಸ್ ಹಾಗೂ ಖಾದಿ ಧ್ವಜದ ನೆನಪಿನ ಕಾಣಿಕೆ ಇದೆ.
----ಬಾಕ್ಸ್---
ಸಹಾಯ ಕೇಂದ್ರ
ವಿವಿಧ ಜಿಲ್ಲೆ, ಅಂತರ್ ರಾಜ್ಯಗಳಿಂದ ಆಗಮಿಸುವ ಅತಿಥಿಗಳಿಗೆ ಸಾರಿಗೆ, ವಸತಿ, ನೋಂದಣಿ ಹಾಗೂ ಇತರ ಅಗತ್ಯ ಮಾಹಿತಿ ನೀಡಿ ಸಹಾಯ ಮಾಡಲು ಮುಖ್ಯವಾಗಿ ಧಾರವಾಡ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಬಸ್‌ನಿಲ್ದಾಣ, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಹಾಯ ಕೇಂದ್ರ ತೆರೆಯಲಾಗಿದೆ. ಕೇಂದ್ರಕ್ಕೆ ಆಗಮಿಸುವ ಅತಿಥಿಗಳನ್ನು ನಿಲ್ದಾಣದಿಂದಲೇ ಸ್ವಾಗತಿಸಲು ಕಲಾ ತಂಡಗಳನ್ನೂ ನೇಮಿಸಲಾಗಿದೆ. ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ನೇಮಿಸಿದ್ದು, ದಿನದ 24 ಗಂಟೆಯೂ ಸಹಾಯ ನೀಡಲಿದ್ದಾರೆ.
----ಬಾಕ್ಸ್----
ರಾಷ್ಟ್ರದಲ್ಲಿ ಮಿಂಚಲಿವೆ ಗರಗ, ಬೆಂಗೇರಿ
ಅತಿಥಿಗಳು, ರಾಜ್ಯ, ಕೇಂದ್ರ ಸರ್ಕಾರದ ಸಚಿವರು, ಉನ್ನತ ಅಧಿಕಾರಿಗಳಿಗೆ ಗರಗ ಮತ್ತು ಬೆಂಗೇರಿ ಖಾದಿ ಕೇಂದ್ರಗಳಲ್ಲಿ 7,500 ಕ್ಕೂ ಹೆಚ್ಚು ಖಾದಿ ಧ್ವಜ ಹೊಂದಿರುವ ನೆನಪಿನ ಕಾಣಿಕೆ ತಯಾರಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಹ ರಾಷ್ಟ್ರಧ್ವಜ ಇರುವ 12 ಇಂಚು ಉದ್ದ 18 ಇಂಚು ಅಳತೆಯ ಟೀಕ್‌ವುಡ್ ಫ್ರೇಂನ ನೆನಪಿನ ಕಾಣಿಕೆ ಸಿದ್ಧವಾಗಿದ್ದು, ಯಲ್ಲಾಪುರದ ಕಲಾವಿದರು ಇದನ್ನು ರೂಪಿಸಿದ್ದಾರೆ. ಇಡೀ ರಾಷ್ಟ್ರದಲ್ಲೇ ರಾಷ್ಟ್ರ ಧ್ವಜಗಳನ್ನು ಅಧಿಕೃತವಾಗಿ ರೂಪಿಸಿ ಪೂರೈಸಲು ಅನುಮತಿ ಹೊಂದಿರುವ ಗರಗ ಮತ್ತು ಬೆಂಗೇರಿ ಖಾದಿ ಕೇಂದ್ರಗಳು ನಮ್ಮ ಜಿಲ್ಲೆಯ ಕೀರ್ತಿ. ಈ ಕೀರ್ತಿಯನ್ನು ರಾಷ್ಟ್ರದಾದ್ಯಂತ ಪಸರಿಸಲು ಈ ಕಾಣಿಕೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.