ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಣದ ಗುಣಮಟ್ಟ ಹಾಗೂ ಶಿಕ್ಷಕಿಯರ ಹಿತ ಕಾಪಾಡುವ ನಿಟ್ಟಿನಲ್ಲಿ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಮಹಿಳಾ ಶಿಕ್ಷಕಿಯರ ಸಂಘ ಸ್ಥಾಪಿಸಿದ್ದು, ಆ. 27ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ಆಲೂರು ವೆಂಕಟರಾವ್ ಭವನದಲ್ಲಿ ಉದ್ಘಾಟನೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಘದ ರಾಷ್ಟ್ರೀಯ ಅಧ್ಯಕ್ಷೆ ಡಾ. ಲತಾ ಮುಳ್ಳೂರ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂಘಕ್ಕೆ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಂಘದ ಲೋಗೊ ಅನಾವರಣಗೊಳಿಸುವರು. ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಪಂ ಸಿಇಒ ಸ್ವರೂಪ ಟಿ.ಕೆ., ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಹಾಗೂ ಕರ್ನಾಟಕ ಸಿಸ್ಲೆಪ್ ನಿರ್ದೇಶಕ ಬಿ.ಕೆ.ಎಸ್. ವರ್ಧನ ಅತಿಥಿಗಳಾಗಿ ಆಗಮಿಸುವರು. ಈ ವೇಳೆ ಸಂಘದ ಎಲ್ಲ ಪದಾಧಿಕಾರಿಗಳ ಪದಗ್ರಹಣ ಸಹ ನಡೆಯಲಿದೆ ಎಂದರು.
ಗುಣಮಟ್ಟದ ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಮತ್ತು ರಾಷ್ಟ್ರೀಯ ಶಿಕ್ಷಣದ ಗುಣಮಟ್ಟ ಸುಧಾರಿಸುವ ವಿವಿಧ ಕಾರ್ಯಕ್ರಮ ಆಯೋಜಿಸುವುದು, ಶಿಕ್ಷಕಿಯರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮತ್ತು ಸರ್ಕಾರದ ಗಮನ ಸೆಳೆಯುವುದು, ಸದಸ್ಯರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವುದು, ಮಹಿಳಾ ಶಿಕ್ಷಕಿಯರ ಮೇಲಿನ ದಬ್ಬಾಳಿಕೆ ಮತ್ತು ದೌರ್ಜನ್ಯ ತಡೆಯುವುದು ಸೇರಿ ವಿವಿಧ ಉದ್ದೇಶಕ್ಕೆ ಸಂಘ ಆರಂಭಿಸಲಾಗಿದೆ ಎಂದರು.
ವೊಕಾಂತಿ ರಂಜಿತಾ, ಎಂ. ಉಮಾ, ಕಲ್ಪನಾ ಭೂತರೆಡ್ಡಿ, ಎಲ್. ಪ್ರತಿಭಾವತಿ, ಶಾಂತಾಬಾಯಿ ಬಿರಾದರ, ಟಿ. ಕುಮಾರಿ, ಇತರರು ಇದ್ದರು.
ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡುವ ಸಮಯದಲ್ಲಿ ಗ್ರಾಮೀಣ ಭಾಗ ಹಾಗೂ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂಬ ಸುತ್ತೋಲೆ ಇದೆ. ಆದರೆ ಅಧಿಕಾರಿಗಳು ಸುತ್ತೋಲೆ ಪ್ರಕಾರ ಆಯ್ಕೆ ಮಾಡುತ್ತಿಲ್ಲ ಎಂಬ ನೋವಿದೆ. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಆದ್ಯತೆ ನೀಡಬೇಕು. ಈವರೆಗೆ ಮಹಿಳೆಯರಿಗೆ ಎಷ್ಟು ರಾಜ್ಯ ಪ್ರಶಸ್ತಿ ಸಿಕ್ಕಿವೆ? ಎಂಬುದನ್ನು ಇಲಾಖೆ ಹೇಳಲಿ. ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸುತ್ತೋಲೆ ಪ್ರಕಾರ ಮಹಿಳೆಯರಿಗೂ ಆದ್ಯತೆ ನೀಡಲಿ.ಲತಾ ಮುಳ್ಳೂರ