ನಂಜನಗೂಡು: ಜೀವ ವಿಮಾ ಪ್ರತಿನಿಧಿಗಳು ತಮ್ಮ ಸವಲತ್ತುಗಳನ್ನು ಪಡೆಯಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಜೀವವಿಮಾ ಪ್ರತಿನಿಧಿಗಳ ಮೈಸೂರು ವಿಭಾಗೀಯ ಮಂಡಳಿ ಅಧ್ಯಕ್ಷ ಕೆಂಪೇಗೌಡ ಹೇಳಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಪ್ರತಿನಿಧಿಗಳ ಗ್ರಾಚ್ಯುಟಿ , ಗ್ರೂಪ್ ಇನ್ಶೂರೆನ್ಸ್, ಪ್ರತಿನಿಧಿಗಳ ಕುಟುಂಬವರ್ಗದ ಮೆಡಿಕಲ್ ಇನ್ಶೂರೆನ್ಸ್ ಭೀಮಸುಗಮ್ ನಿಲುಗಡೆ ಮಾಡಲಾಗಿದೆ. ಹಿಂದೆ ಪಾಲಿಸಿಯ ಅವಧಿ ಮುಗಿಯುವವರೆಗೂ ಕಮಿಷನ್ ನೀಡಲಾಗುತ್ತಿತ್ತು. ಈಗ ಏಳು ವರ್ಷಕ್ಕೆ ಕಮಿಷನ್ ನಿಲ್ಲಿಸುವ ತೀರ್ಮಾನವನ್ನು ಆಡಳಿತ ಮಂಡಳಿ ಕೈಗೊಂಡಿದ್ದು, ಪ್ರತಿನಿಧಿಗಳ ಒಕ್ಕೂಟ ನಡೆಸಿದ ಹೋರಾಟದ ಫಲವಾಗಿ ರದ್ದುಗೊಂಡಿದೆ. ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಂಘಟನೆಗೆ ಮಾನ್ಯತೆ ಸಿಕ್ಕಿದೆ. ನಿಗಮದಿಂದ ಪ್ರತಿನಿಧಿಗಳಿಗೆ ಅನ್ಯಾಯವಾದಾಗಲೆಲ್ಲ ಸಂಘಟನೆ ಹೋರಾಟ ಮಾಡಿ ನ್ಯಾಯ ದೊರಕಿಸಿದೆ ಎಂದರು.
ಜೀವವಿಮಾ ಘಟಕದ ಹಿರಿಯ ಶಾಖಾಧಿಕಾರಿ ರಾಮಸ್ವಾಮಿ ಮಾತನಾಡಿ, ಎಲ್‌ಐಸಿಯು ತನ್ನ ಲಾಯಟಿಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಪ್ರತಿನಿಧಿಗಳು ಖಾಸಗಿ ಕಂಪನಿಗಳ ಪೈಪೋಟಿ ನಡುವೆ ತಮ್ಮ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಪ್ರಾರಂಭದಿಂದ ಎಲ್ಐಸಿ ಗ್ರಾಹಕರ ನಂಬಿಕೆಗೆ ಪಾತ್ರವಾಗಿ ಕೆಲಸ ಮಾಡುತ್ತಾ ಬಂದಿದೆ. ಎಲ್ಲರೂ ಎಲ್‌ಐಸಿ ಸದಸ್ಯರಂತೆ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಇಂದಿಗೂ ಕೂಡ ಲಾಯಟಿ ಉಳಿಸಿಕೊಂಡು ಬಂದಿದೆ ಎಂದರು.
ಅಭಿವೃದ್ಧಿ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಚಿನ್ನಪ್ಪ, ಎಸ್.ಆತ್ವಿಕ್, ವಿಭಾಗೀಯ ಮಂಡಳಿ ಪ್ರಧಾನ ಕಾರ್ಯದರ್ಶಿ ಬಿ.ಆರ್.ಮಹೇಶ್, ನಂಜನಗೂಡು ಗೌರವಾಧ್ಯಕ್ಷ ಎಚ್.ಆರ್.ಶಿವಕುಮಾರ್, ಗುಂಡ್ಲುಪೇಟೆ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಜಿ.ಮಾಧು, ಮಹಿಳಾ ಘಟಕದ ಶಶಿಕಲಾ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ಕೆ.ಇಂದಿರಾ, ಉಪಾಧ್ಯಕ್ಷ ಬಿ.ಆರ್.ಚಿಕ್ಕಣ್ಣ, ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಧರ್ ರಾವ್, ಉಪಾಧ್ಯಕ್ಷರಾಗಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ರಂಗಸ್ವಾಮಿ, ಖಜಾಂಚಿಯಾಗಿ ಗುರುಸಿದ್ದಾಚಾರಿ, ಸಂಘಟನಾ ಕಾರ್ಯದರ್ಶಿಯಾಗಿ ಮಹದೇವಯ್ಯ, ಸಹ ಕಾರ್ಯದರ್ಶಿಯಾಗಿ ಶಿವಣ್ಣ ಆಯ್ಕೆಯಾದರು.
ಹಿರಿಯ ಪ್ರತಿನಿಧಿಗಳಾದ ಶಿವಕುಮಾರ್, ಶ್ರೀಧರ ರಾವ್, ಮಹದೇವಯ್ಯ, ಬಿ.ಆರ್.ಚಿಕ್ಕಣ್ಣ. ಶಶಿಕಲಾ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿನಿಧಿಗಳ ಮಕ್ಕಳನ್ನು ಸನ್ಮಾನಿಸಲಾಯಿತು.