ಹಾಸನ: ಮಕ್ಕಳು ಮೊಬೈಲ್, ಟಿವಿಯಲ್ಲೇ ಸಮಯ ವ್ಯರ್ಥ ಮಾಡದೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಹೇಮಲತಾ ಕಮಲ್ ಕುಮಾರ್ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನ್ಯಾಷನಲ್ ಕ್ಲಾಸಿಕಲ್ ಡಾನ್ಸ್ ಅಕಾಡೆಮಿ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಮಕ್ಕಳು ಹೆಚ್ಚಾಗಿ ಮೊಬೈಲ್ ಗೀಳಿಗೆ ಒಳಗಾಗುತ್ತಿದ್ದಾರೆ. ಇದರ ಹೊರತು ನೃತ್ಯ, ಸಂಗೀತಾ, ಆಟೋಟ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ನೃತ್ಯ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಪಾಲಕರು ಮಕ್ಕಳನ್ನು ವಿವಿಧ ಚಟುವಟಿಕೆಯಲ್ಲಿ ತೊಡಗಿಸಬೇಕು ಎಂದು ಸಲಹೆ ನೀಡಿದರು.
ನ್ಯಾಷನಲ್ ಕ್ಲಾಸಿಕಲ್ ಡಾನ್ಸ್ ಅಕಾಡೆಮಿ ಕಾರ್ಯದರ್ಶಿ ವಿದೂಷಿ ಡಾ. ಸ್ವಾತಿ ಪಿ.ಭಾರದ್ವಾಜ್ ಮಾತನಾಡಿದರು. ಜೆಡಿಎಸ್ ಮುಖಂಡ ಕಮಲ್ ಕುಮಾರ್, ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಅಧ್ಯಾತ್ಮಿಕ ಚಿಂತಕ ಚಂದನ್, ನೃತ್ಯ ತರಬೇತುದಾರರಾದ ಚೈತ್ರಾ ಸತ್ಯನಾರಾಯಣ್, ದಿವ್ಯರಾಣಿ, ಸುಭೀಕ್ಷಾ, ಗಣೇಶ್ ಇತರರು ಇದ್ದರು.