ಎನ್.ಆರ್.ಪುರ: ಕಾನೂರು ಗ್ರಾಮ ಪಂಚಾಯಿತಿ ಸಂಕ್ಸೆ ಗ್ರಾಮದ ಮೇಲಿನಗುಡ್ಡೇಹಳ್ಳದ 9ನೇ ತರಗತಿ ಕುಸುಮಾ ವೈಸ್ ಕ್ಯಾಪ್ಟನ್ ಆಗಿದ್ದ ರಾಜ್ಯ ಥ್ರೋಬಾಲ್ ಸಬ್ ಜೂನಿಯರ್ಸ್ ತಂಡ ಛತ್ತೀಸ್ ಘಡದಲ್ಲಿ ಮಾ.28ರಿಂದ 30ರವರೆಗೆ ನಡೆದ ರಾಷ್ಟ್ರಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಬೆಂಗಳೂರಿನ ಕರ್ನಾಟಕ ಥ್ರೋ ಬಾಲ್ ಅಸೋಷಿಯೇಷನ್ ಛತ್ತೀಸ್‌ಘಡ ರಾಜ್ಯದ ಬಿಲಾಯಿ ಎಂಬಲ್ಲಿ 32ನೇ ವರ್ಷದ ರಾಷ್ಟ್ರಮಟ್ಟದ 16 ವರ್ಷದ ಮೇಲ್ಪಟ್ಟ ಜೂನಿಯರ್ಸ್ ತಂಡಗಳಿಗೆ ಹಾಗೂ 16 ವರ್ಷದ ಒಳಗಿನ ಸಬ್ ಜೂನಿಯರ್ಸ್ ತಂಡಗಳಿಗೆ ಪ್ರತ್ಯೇಕವಾಗಿ ಥ್ರೋಬಾಲ್ ಪಂದ್ಯಾವಳಿ ಏರ್ಪಡಿಸಿತ್ತು. ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಿತ್ತು. ಛತ್ತೀಸ್ ಘಡದಲ್ಲಿ ನಡೆದ ರಾಷ್ಟ್ರ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಜಾರ್ಖಂಡ್, ಹರಿಯಾಣ, ಮಧ್ಯಪ್ರದೇಶ, ದೆಹಲಿ, ತಮಿಳುನಾಡು, ಕರ್ನಾಟಕ ಸೇರಿದಂತೆ 26 ರಾಜ್ಯಗಳ ಥ್ರೋಬಾಲ್ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಕರ್ನಾಟಕದ ಸಬ್ ಜೂನಿಯರ್ಸ್ ತಂಡ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ತಂಡದ ವೈಸ್ ಕ್ಯಾಪ್ಟನ್ ಕುಸುಮಾ ತಿಳಿಸಿದ್ದಾಳೆ.
ಕುಸುಮಾ ಮೇಲಿನಗುಡ್ಡೇಹಳ್ಳದ ಸಾವಿತ್ರಿ ಎಂಬುವರ ಪುತ್ರಿ. ಈಗಾಗಲೇ ಥ್ರೋಬಾಲ್, ವಾಲೀಬಾಲ್, ಹ್ಯಾಂಡ್ ಬಾಲ್, ಜಾವಲಿನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪಡೆದಿದ್ದಾಳೆ. ಪ್ರಸ್ತುತ ಕೊಪ್ಪ ಶ್ರೀ ವೆಂಕಟೇಶ್ವರ ವಿದ್ಯಾಮಂದಿರ(ಬಿಜಿಎಸ್)ದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ್ ಮಾರ್ಗದರ್ಶನದಲ್ಲಿ ವಾಲೀಬಾಲ್‌ನಲ್ಲಿ 3 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ತಂಡವನ್ನು ಪ್ರತಿನಿಧಿಸಿದ್ದಾಳೆ. ಥ್ರೋಭಾಲ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಗೆದ್ದ ತಂಡದಲ್ಲಿ ಭಾಗವಹಿಸಿದ್ದಳು. ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, ಜಾವಲಿನ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ.