ಹಾಸನ: ಗಾಂಧೀಜಿಯವರ ಸಿದ್ಧಾಂತ, ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು. ಅಹಿಂಸೆ, ಸತ್ಯತೆಯನ್ನು ಎಲ್ಲ ಜನಾಂಗದವರು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು.
ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಎಂ.ಜಿ.ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹಿಂಸೆಗೆ ಪೂರ್ಣ ವಿರಾಮ ಹಾಕಿ ಅಹಿಂಸಾತ್ಮಕ ಹಾಗೂ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಗಾಂಧೀಜಿಯವರು ಕರೆ ನೀಡಿದ್ದಾರೆ. ಆದರೆ ಅವರ ಆದರ್ಶಗಳು ಇತ್ತಿದಿನ ದಿನಗಳಲ್ಲಿ ಮರೆಯಾಗುತ್ತಿವೆ. ಆದ್ದರಿಂದ ಎಲ್ಲರೂ ಗಾಂಧೀಜಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಅಗತ್ಯವಿದೆ ಎಂದರು.
ಎಲ್ಲ ಧರ್ಮಗಳ ಧರ್ಮಗುರುಗಳು ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ, ತಮ್ಮ ಧರ್ಮಗಳ ಸಾರವನ್ನು ಬಿತ್ತುವ ಮೂಲಕ ಅಹಿಂಸೆ, ಸತ್ಯವನ್ನು ಎತ್ತಿ ಹಿಡಿದಿದ್ದಾರೆ. ಸಣ್ಣ-ಪುಟ್ಟ ವಿಚಾರಗಳಿಗೆ ಜಗಳ, ಹಿಂಸೆಗಳನ್ನು ಮಾಡದೆ ಎಲ್ಲರೂ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಗಾಂಧೀಜಿಯವರ ತೋರಿದ ಹಾದಿಯಂತೆ ಸರ್ವ ಜನಾಂಗದವರು ಸಹೋದರ- ಸಹೋದರಿಯರು ಸಹಬಾಳ್ವೆಯಿಂದ ಇರಬೇಕು. ಗಾಂಧೀಜಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದು ಧರ್ಮ ಕುರಿತು ವಿ.ವಿ ಭಟ್, ಮುಸ್ಲಿಂ ಧರ್ಮ ಕುರಿತು ಜನಾಬ್ ಮೌಲಾನ ಹಬೀಬುಲ್ಲ, ಕ್ರಿಶ್ಚಿಯನ್ ಧರ್ಮ ಕುರಿತು ವೀನಿಶ್ ಸ್ವರೂಪ್, ಬೌದ್ಧ ಧರ್ಮ ಕುರಿತು ಬಸವರಾಜ್, ಜೈನ್ ಧರ್ಮ ಕುರಿತು ಪದ್ಮಶ್ರೀ ಅವರು ಪ್ರವಚನ ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಗಣ್ಯರೆಲ್ಲರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿರವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ನಮನ ಸಲ್ಲಿಸಿದರು. ಕೇಂದ್ರೀಯ ಶಾಲಾ ಮಕ್ಕಳು ಗಾಂಧೀಜಿ ಅವರ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ಭಜನ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ನಗರಸಭೆಯ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಉಪವಿಭಾಗಾಧಿಕಾರಿ ಮಾರುತಿ, ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಮೀನಾಕ್ಷಮ್ಮ ಪಾಲ್ಗೊಂಡಿದ್ದರು.
ಬಹುಮಾನ ವಿತರಣೆ
ಗಾಂಧಿ ಜಯಂತಿ ಹಿನ್ನಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಮದ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲೆ, ಪದವಿ ಪೂರ್ವ, ಪದವಿ/ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಗಮನ ಸೆಳೆದ ಗಾಂಧಿ ವೇಷಧಾರಿಗಳು:
ಪುಟಾಣಿ ಮಕ್ಕಳು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ವೇಷಧಾರಿಗಳಾಗಿ ಆಗಮಿಸಿ ಸಾರ್ವಜನಿಕರ ಗಮನ ಸೆಳೆದರು. ಮೆಚ್ಚುಗೆ ಪಡೆದ ವೇಷದಾರಿಗಳಿಗೆ ಬಹುಮಾನ ನೀಡಲಾಯಿತು.
ಶ್ರಮದಾನ:
ಗಾಂಧಿ ಜಯಂತಿ ಹಿನ್ನಲೆಯಲ್ಲಿ ಜಿಲ್ಲಾಡಳಿತದಿಂದ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು. ಡೈರಿ ವೃತ್ತದಿಂದ ಎನ್.ಆ. ವೃತ್ತದವರೆಗೆ ಸ್ವಚ್ಚತಾ ಕಾರ್ಯ ನಡೆಸಲಾಯಿತು. ನಗರ ಸಭೆ ಅಧ್ಯಕ್ಷ ಎಂ ಚಂದ್ರೇಗೌಡ, ಪೌರಾಯುಕ್ತ ನರಸಿಂಹ ಮೂರ್ತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸ್ವಚ್ಚತಾ ಕಾರ್ಯದಲ್ಲಿ ಕೈಜೋಡಿಸಿದರು.