ಜಿಲ್ಲೆ

ರಾಷ್ಟ್ರಪತಿಗೆ ಸಿದ್ಧಾರೂಢರ ಮೂರ್ತಿ ಸ್ಮರಣಿಕೆ

ಹುಬ್ಬಳ್ಳಿ : ಮಹಾನಗರ ಪಾಲಿಕೆಯಿಂದ ಪೌರ ಸನ್ಮಾನ ಸ್ವೀಕರಿಸಲು ಸೆ. 26ರಂದು ಹುಬ್ಬಳ್ಳಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶ್ರೀ ಸಿದ್ಧಾರೂಢ ಸ್ವಾಮಿಯ ಅಂದಾಜು 1 ಕೆಜಿ ತೂಕದ ಬೆಳ್ಳಿ ಮೂರ್ತಿಯನ್ನು ಸ್ಮರಣಿಕೆಯನ್ನಾಗಿ ನೀಡಲಾಗುತ್ತಿದೆ.
ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸುವ ರಾಷ್ಟ್ರಪತಿ ಅವರು, ಅಲ್ಲಿಂದ 12.20ಕ್ಕೆ ಜಿಮಖಾನಾ ಮೈದಾನಕ್ಕೆ ಆಗಮಿಸುವರು. ನಂತರ ರಾಷ್ಟ್ರಪತಿ ಅವರಿಗೆ ಪೌರ ಸನ್ಮಾನ ನಡೆಯಲಿದೆ. ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ರಾಷ್ಟ್ರಪತಿ ಅವರೊಂದಿಗೆ ೆಟೋ ತೆಗೆಯಿಸಿಕೊಳ್ಳಲಿದ್ದಾರೆ.
ರಾಷ್ಟ್ರಪತಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೂರ್ವ ಸಿದ್ಧತೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯಲಿರುವ ದೇಶಪಾಂಡೆ ನಗರದ ಜಿಮಖಾನಾ ಮೈದಾನದವರೆಗಿನ ರಸ್ತೆ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಮಾರ್ಗ ಮಧ್ಯದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ರಸ್ತೆ ಮಧ್ಯೆ ಹಾಗೂ ಇಕ್ಕೆಲಗಳಲ್ಲಿನ ವಿದ್ಯುತ್ ಕಂಬಗಳಲ್ಲಿ ನೇತಾಡುತ್ತಿದ್ದ ಅನಧಿಕೃತ ಜಾಹೀರಾತು ಲಕಗಳನ್ನು ತೆಗೆದುಹಾಕಲಾಗುತ್ತಿದೆ. ದೇಶಪಾಂಡೆ ನಗರದ ನಾಲಾದ ತಡೆಗೋಡೆ ಬಿದ್ದಿದ್ದು, ಅದನ್ನು ಪುನರ್ ನಿರ್ಮಿಸಲಾಗುತ್ತಿದೆ. ನಾಲಾವನ್ನು ಸ್ವಚ್ಛಗೊಳಿಸಲಾಗಿದೆ. ರಸ್ತೆ ಇಕ್ಕೆಲಗಳನ್ನು ಶೃಂಗರಿಸಲಾಗುತ್ತಿದೆ.
ಬುಧವಾರ ಮೈದಾನದಲ್ಲಿ 30 ಸಾವಿರ ಚದುರ ಅಡಿ ವಿಸ್ತೀರ್ಣದಲ್ಲಿ ಜರ್ಮನ್ ಆ್ಯಂಗಲ್ ಅತ್ಯಾಧುನಿಕ ತಾಂತ್ರಿಕತೆಯ ಟೆಂಟ್ ಹಾಕಲಾಗಿದೆ. ಗುರುವಾರ ಈ ಟೆಂಟ್‌ನಲ್ಲಿ ವೇದಿಕೆ ನಿರ್ಮಿಸುವ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು ಕಾರ್ಯಕ್ರಮದ ಸಿದ್ಧತೆಯ ಉಸ್ತುವಾರಿ ವಹಿಸಿರುವ ಮಾಜಿ ಮೇಯರ್ ವೀರಣ್ಣ ಸವಡಿ ಹಾಗೂ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ‘ವಿಜಯವಾಣಿ’ಗೆ ತಿಳಿಸಿದ್ದಾರೆ.