ಕೋಲಾರ ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಧ್ವಜ ವಿನ್ಯಾಸಕಾರ ತಿಂಗಳಿ ವೆಂಕಟಯ್ಯ ಜಯಂತಿ ಆಚರಿಸಿದ್ದು, ಗ್ರಾಪಂ ಪಿಡಿಒ ಜಿ.ಲಕ್ಷ್ಮೀ, ಮುಖ್ಯಶಿಕ್ಷಕ ಜಿ.ಶ್ರೀನಿವಾಸ್, ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಮಚಂದ್ರಪ್ಪ ರಾಷ್ಟ್ರದ್ವಜ ಪ್ರದರ್ಶಿಸಿದರು.  
ಜಿಲ್ಲೆ

ರಾಷ್ಟ್ರಧ್ವಜ ಗೌರವಿಸುವುದು ಎಲ್ಲರ ಕರ್ತವ್ಯ

ಕೋಲಾರ : ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರಧ್ವಜವನ್ನು ಗೌರವಿಸಬೇಕು. ಆ ಮೂಲಕ ರಾಷ್ಟ್ರಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಹರಟಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಲಕ್ಷ್ಮೀ ಅಭಿಪ್ರಾಯ ಪಟ್ಟರು.
ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾಷ್ಟ್ರಧ್ವಜ ವಿನ್ಯಾಸಕಾರ ತಿಂಗಳಿ ವೆಂಕಟಯ್ಯ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶಭಕ್ತಿ, ದೇಶಪ್ರೇಮವನ್ನು ಪ್ರಾಥಮಿಕ ಶಾಲೆಯಿಂದಲೇ ವಿದ್ಯಾರ್ಥಿಗಳಲ್ಲಿ ಮೂಡಿಸುವಂತೆ ಆಗಬೇಕು. ವಿದ್ಯಾರ್ಥಿ ದೆಸೆಯಿಂದಲೇ ರಾಷ್ಟ್ರೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು. ರಾಷ್ಟ್ರ ಲಾಂಛನ, ರಾಷ್ಟ್ರ ಚಿನ್ಹೆ, ರಾಷ್ಟ್ರ ಪಕ್ಷಿ, ರಾಷ್ಟ್ರ ಪ್ರಾಣಿ, ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಬಗ್ಗೆ ಅಭಿಮಾನ, ಗೌರವ ಮೂಡುವಂತಾಗಬೇಕು ಎಂದರು.
ಮುಖ್ಯಶಿಕ್ಷಕ ಜಿ.ಶ್ರೀನಿವಾಸ್ ಮಾತನಾಡಿ, ಪಿಂಗಳಿ ವೆಂಕಟಯ್ಯ ಶಿಕ್ಷಣ ತಜ್ಞರಾಗಿ, ಭಾಷಾ ತಜ್ಞರಾಗಿ ದೇಶದ ಸ್ವಾತಂತ್ರ‍್ಯಕ್ಕೆ ಹೋರಾಟ ಮಾಡಿದವರು. ಸತತ ಐದು ವರ್ಷ ವಿವಿಧ ರಾಷ್ಟ್ರಧ್ವಜಗಳ ವಿನ್ಯಾಸಗಳನ್ನು ಅಧ್ಯಯನ ಮಾಡಿ ಕಡೆಗೆ ತ್ರಿವರ್ಣ ರಾಷ್ಟ್ರಧ್ವಜ ವಿನ್ಯಾಸ ಮಾಡಿದವರು ಎಂದರು.
ಭಾರತ ಸೇವಾದಳ ಜಿಲ್ಲಾ ಘಟಕದ ಮುಖ್ಯಸ್ಥ ಎಂ.ಬಿ. ದಾನೇಶ್ ಮಾತನಾಡಿ, ರಾಷ್ಟಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನ, ನಮ್ಮ ರಾಷ್ಟ್ರದ ಗೌರವದ ಸಂಕೇತಗಳಾಗಿದೆ. ರಾಷ್ಟ್ರದ್ವಜ ಬಳಸುವಾಗ ವಿಧಿ ವಿಧಾನ ತಪ್ಪದೆ ಅನುಸರಿಸಿ ಗೌರವ ನೀಡಬೇಕು ಎಂದು ಹೇಳಿದರು.
ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಮಚಂದ್ರಪ್ಪ ಮತ್ತಿತರರು ಹಾಜರಿದ್ದರು