ಜಿಲ್ಲೆ

ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ) ವಿದ್ಯಾರ್ಥಿಗಳು ಅಪಾರ ಜವಾಬ್ದಾರಿಯನ್ನು ಹೊಂದಿದ್ದು, ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಉದ್ಯಮಿ ಡಾ. ವಿ.ಎಸ್.ವಿ ಪ್ರಸಾದ ಹೇಳಿದರು.

ಐಐಟಿ ಧಾರವಾಡದಲ್ಲಿ ಶುಕ್ರವಾರ ಆಯೋಜಿಸಿದ್ದ ಪರ್ಸೆಕ್-5 ತಾಂತ್ರಿಕ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಭವಿಷ್ಯವನ್ನು ರೂಪಿಸುವ ಯುವ ಮನಸ್ಸುಗಳು ನಾವೀನ್ಯತೆ, ಸಮರ್ಪಣೆ ಮತ್ತು ಮುಂದಾಲೋಚನೆ ಗುಣಗಳನ್ನು ಹೊಂದಿರುವುದು ಅತ್ಯಗತ್ಯ ಎಂದರು.

ವಿದ್ಯಾರ್ಥಿಗಳು ಶ್ರೇಷ್ಠತೆಗಾಗಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತೊಡಗಿಸಬೇಕು. ರಾಷ್ಟ್ರೀಯ ಬೆಳವಣಿಗೆ ಮತ್ತು ಜಾಗತಿಕ ನಾಯಕತ್ವದ ಕಡೆಗೆ ಸಾಮೂಹಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಡೀನ್ ಪ್ರೊ. ನಾರಾಯಣ ಪುಣೇಕರ ಮಾತನಾಡಿ, ತಾಂತ್ರಿಕ ಉತ್ಸವದಲ್ಲಿ ದೇಶದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇಂಥ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಸಹಯೋಗವನ್ನು ಬೆಳೆಸುತ್ತದೆ. ಸಮಗ್ರ ಶಿಕ್ಷಣ ಮತ್ತು ತಾಂತ್ರಿಕ ಶ್ರೇಷ್ಠತೆಯ ನಿಟ್ಟಿನಲ್ಲಿ ಧಾರವಾಡ ಐಐಟಿ ಯ ಬದ್ಧತೆಯನ್ನು ತೋರಿಸುತ್ತದೆ ಎಂದರು.

ಡೀನ್ ಗಳಾದ ಅಮರವಾಥ ಹೆಗಡೆ, ಪ್ರೊ. ಧೀರಜ ಪಾಟೀಲ, ಪ್ರೊ. ಸೂರ್ಯಪ್ರತಾಪ ಸಿಂಗ್, ಪ್ರೊ.ರಾಜೇಶ್ವರ ರಾವ್ ಎಂ. ಇದ್ದರು. ತಾಂತ್ರಿಕ ಉತ್ಸವದಲ್ಲಿ ಕೃತಕ ಬುದ್ಧಿಮತ್ತೆ, ರೋಬಾಟಿಕ್ಸ್, ಮಷಿನ್ ಲರ್ನಿಂಗ್, ಸ್ಪೇಸ್ ಡಾಟಾ ಸೈನ್ಸ್, 3ಡಿ ಮಾಡೆಲಿಂಗ್ ಆಂಡ್ ಸಸ್ಟೆನೇಬಲ್ ಇನ್ನೊವೇಶನ್, ಬ್ಲಾಕ್ ಚೈನ್, ಸೈಬರ್ ಸೆಕ್ಯುರಿಟಿ, ಐಒಟಿ, ಕ್ಲೌಡ್ ಕಂಪ್ಯೂಟಿಂಗ್, ಇತ್ಯಾದಿ ವಿಷಯಗಳ ಮೇಲೆ ಕಾರ್ಯಾಗಾರ, ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು, ಸಂಶೋಧಕರು, ಉದ್ಯಮ ವೃತ್ತಿಪರರು ಪಾಲ್ಗೊಂಡಿದ್ದರು.