ಆಲ್ದೂರಿನಲ್ಲಿ ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಕೆಯಲ್ಲಿ ಡಾ .ರಾಜರತ್ನ ಪಾಲ್ಗೊಂಡಿದ್ದರು.  
ಜಿಲ್ಲೆ

ರಾಷ್ಟ್ರಕ್ಕೆ ಬೇಕಿರುವುದು ಏಕರೂಪ ಶಿಕ್ಷಣ ಪದ್ಧತಿ

ಎಸ್.ಎನ್.ರವೀಂದ್ರ

ಆಲ್ದೂರು: ಒಂದು ದೇಶ ಒಂದು ಚುನಾವಣೆ ಅಗತ್ಯವಿಲ್ಲ. ನಮಗೆ ಒಂದು ದೇಶ, ಒಂದೇ ರೀತಿಯ ಶಿಕ್ಷಣದ ಅವಶ್ಯಕತೆ ಇದೆ ಎಂದು ಅಂಬೇಡ್ಕರ್ ಮೊಮ್ಮಗ ಡಾ. ರಾಜರತ್ನ ಅಂಬೇಡ್ಕರ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ದೇಶ ಒಂದು ಚುನಾವಣೆ ಬದಲು ದೇಶದಲ್ಲಿ ಎಲ್ಲ ಸಮುದಾಯಕ್ಕೂ ಒಂದೇ ರೀತಿಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಿದರೆ ಎಲ್ಲರಿಗೂ ಸಮಾನತೆ ಸಿಗುತ್ತದೆ ಎಂದರು.

ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿದ ಸಂದರ್ಭದಲ್ಲಿ ಅಂಬೇಡ್ಕರ್ ಹೇಳಿದ ಪ್ರಮುಖ ವಿಷಯ ಪ್ರಜಾಪ್ರಭುತ್ವವನ್ನು ಉತ್ತಮಗೊಳಿಸುವುದು ಹಾಗೂ ಜಾತಿ ವ್ಯವಸ್ಥೆ ವಿನಾಶಮಾಡುವುದು ಹೇಗೆ ಎಂಬುದು. ಜಾತಿ ಪದ್ಥತಿ ನಿರ್ಮೂಲನೆಯಾಗಬೇಕು ಎಂದು ಪ್ರತಿಪಾದನೆ ಮಾಡಿದ್ದರು. ಪ್ರಧಾನ ಮಂತ್ರಿ ಅವರು ಡಿಜಿಟಲ್ ಹಣ ವರ್ಗಾವಣೆ ಸೇರಿದಂತೆ ಹಲವು ರೀತಿಯ ಡಿಜಿಟಲ್ ವ್ಯವಹಾರದ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಘೋಷಣೆ ಮಾಡಿದ್ದರು. ಇಲ್ಲಿಯವರೆಗೂ ಕಾರ್ಯಗತವಾಗಿಲ್ಲ ಎಂದರು.

ಮಾಜಿ ಸಭಾಧ್ಯಕ್ಷ ರಮೇಶ್‌ಕುಮಾರ್ ಮಾತನಾಡಿ, ಬಸವಣ್ಣ, ಅಂಬೇಡ್ಕರ್, ಕುವೆಂಪು ಅವರನ್ನು ಜಾತಿಯ ಜೈಲಿನಲ್ಲಿ ಬಂಧಿಸುವ ಕೆಲಸ ನಡೆಯುತ್ತಿದೆ. ಅಂಬೇಡ್ಕರ್ ದಲಿತರಿಗೆ, ಕುವೆಂಪು ಅವರು ಒಕ್ಕಲಿಗರಿಗೆ, ಬಸವಣ್ಣ ಲಿಂಗಾಯತರಿಗೆ ಎಂಬ ವಿಷಬೀಜ ಬಿತ್ತುತ್ತಿದ್ದೇವೆ. ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಅರ್ಥಮಾಡಿಕೊಳ್ಳಲಿಲ್ಲ. ಬಸವಣ್ಣ ಅವರ ವಚನವನ್ನು ಜಾರಿಗೆ ತರಲಿಲ್ಲ. ಅಂಬೇಡ್ಕರ್ ದೇಶದ ಸರ್ವ ಜನಾಂಗದ ಆಸ್ತಿ. ಅಂಬೇಡ್ಕರ್ ನೀಡಿದ ಸಂವಿಧಾನದಿಂದ ದೇಶ ಸುಭದ್ರವಾಗಿದೆ. ಏಷ್ಯಾ ಖಂಡಕ್ಕೆ ಹೊಲಿಸಿದರೆ ಎಷ್ಟೇ ಸರ್ಕಾರಗಳು ಬದಲಾದರೂ ನಮ್ಮ ದೇಶ ಸುಭಿಕ್ಷವಾಗಿದೆ ಎಂದರೆ ಅದಕ್ಕೆ ಸಂವಿಧಾನವೇ ಕಾರಣ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಎಲ್ಲ ಧರ್ಮಗಳಿಗೂ ಬೇರೆ ಬೇರೆ ಗ್ರಂಥಗಳಿವೆ. ಆದರೆ ರಾಷ್ಟ್ರಕ್ಕೆ ಇರುವುದು ಒಂದೇ ಗ್ರಂಥ. ಅದು ಅಂಬೇಡ್ಕರ್ ನೀಡಿರುವ ಸಂವಿಧಾನ ಎಂದರು.

ಆಲ್ದೂರಿನ ಮಣ್ಣಿಗೆ ಅದ್ಭುತ ಗುಣವಿದೆ. ಚಳವಳಿಗಳ ನಾಯಕತ್ವಕ್ಕೆ ಜನ್ಮಕೊಟ್ಟ ಸ್ಥಳ. ಈ ಜಾಗದಲ್ಲಿ ಸ್ವಾತಂತ್ರ್ಯ ಚಳವಳಿಯೂ ದೊಡ್ಡಮಟ್ಟದಲ್ಲಿ ನಡೆದಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡ ಬಿ.ಪಿ.ಬಸಪ್ಪಶೆಟ್ಟಿ ಸೇರಿದಂತೆ ಹಲವು ಜನರನ್ನು ಇಲ್ಲಿ ಸ್ಮರಿಸಬಹುದು ಎಂದರು.

ನಿವೃತ್ತ ಉಪ ನಿರ್ದೇಶಕ ರುದ್ರಸ್ವಾಮಿ ವಿಚಾರ ಮಂಡಿಸಿದರು. ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಗೌರವ ಅಧ್ಯಕ್ಷ ಹೊನ್ನಪ್ಪ,ನವರಾಜ್ ಮಾತನಾಡಿದರು. 2011ರಲ್ಲಿ ಅಂಬೇಡ್ಕರ್ ವೃತ್ತದ ಹೋರಾಟದಲ್ಲಿ ಸೆರೆಮನೆ ಅನುಭವಿಸಿದ ಸದಸ್ಯರನ್ನು ಸನ್ಮಾನಿಸಲಾಯಿತು.

ಡಾ. ರಾಜರತ್ನ ಅಂಬೇಡ್ಕರ್ ಅವರನ್ನು ಕೆಳ ಬಸ್ ನಿಲ್ದಾಣದ ಬಳಿಯಿಂದ ತೆರೆದ ವಾಹನದಲ್ಲಿ ಬ್ಯಾಂಡ್‌ಸೆಟ್‌ನೊಂದಿಗೆ ಅದ್ದೂರಿಯಾದ ಮೆರವಣಿಗೆ ಮೂಲಕ ಕರೆತರಲಾಯಿತು. ನಂತರ ಅವರು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ವಿವಿಧ ಕಲಾ ತಂಡಗಳು ಮೆರವಣಿಯಲ್ಲಿ ಭಾಗವಹಿಸಿದ್ದವು. ಪಟಾಕಿ ಸಿಡಿಸಿ , ಡ್ರಮ್‌ಸೆಟ್ ವಾದ್ಯಕ್ಕೆ ತಕ್ಕಂತೆ ಕುಣಿದು ಕಾರ್ಯಕರ್ತರು ಸಂಭ್ರಮಿಸಿದರು.

ಗಣೇಶ್ ಕಠಾರದಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಬಿ.ಬಿ.ನಿಂಗಯ್ಯ, ಮೋಟಮ್ಮ, ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಉದ್ಯಮಿ ರವಿಕೀರ್ತಿ, ಗಿರೀಶ್, ಕವೀಶ್, ಹೆಡದಾಳ್ ಕುಮಾರ್, ಕೃಷ್ಣಮೂರ್ತಿ, ಕೆಂಚಯ್ಯ, ಪುಟ್ಟರಾಜು, ಯೊಗೇಶ್ ತುಡಕೂರು, ಪೂರ್ಣೇಶ್, ವಸಂತ್, ಗಿರೀಶ್, ದೇವರಹಳ್ಳಿ ಉಮೇಶ್, ಕೌಶಿಕ್, ಮಹೇಶ್, ನಾರಾಯಣ ಆಚಾರ್ಯ ಇತರರಿದ್ದರು.