ಚಿತ್ರದುರ್ಗ: ಭಾರತ-ಚೀನಾ ನಡುವೆ 1962ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಮುರುಘಾಮಠದ ಶ್ರೀಗಳಾಗಿದ್ದ ಲಿಂ. ಶ್ರೀ ಜಯವಿಭವ ಮುರುಘ ರಾಜೇಂದ್ರ ಸ್ವಾಮೀಜಿ ಅವರು ತಾವು ಧರಿಸುತ್ತಿದ್ದ ಚಿನ್ನದ ಕಿರೀಟ, ಆಭರಣ ಹಾಗೂ ಧನವನ್ನು ರಾಷ್ಟ್ರ ರಕ್ಷಣಾ ನಿಧಿಗೆ ಸರ್ಮಪಿಸಿ ದೇಶಭಕ್ತಿ ಮೆರೆದಿದ್ದರು ಎಂದು ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀ ಮಠದ ಶ್ರೀ ಜಯವಿಭವ ಮುರುಘರಾಜೇಂದ್ರ ಶ್ರೀಗಳ ಲೀಲಾ ವಿಶ್ರಾಂತಿ ತಾಣದಲ್ಲಿ ಬುಧವಾರ ಏರ್ಪಡಿಸಿದ್ದ 61ನೇ ಸ್ಮರಣೋತ್ಸವದಲ್ಲಿ ಲಿಂ. ಶ್ರೀಗಳ ಗದ್ದುಗೆಗೆ ಪುಷ್ಪಾರ್ಚನೆ, ವಚನಾಭಿಷೇಕ ನೆರವೇರಿಸಿ ಮಾತನಾಡಿದರು.
ಮುರುಘಾ ಪರಂಪರೆಯಲ್ಲಿ ಆಗಿಹೋಗಿರುವ ಎಲ್ಲ ಜಗದ್ಗುರುಗಳು ದೂರದೃಷ್ಟಿಯುಳ್ಳವರಾಗಿದ್ದರು. ನಮ್ಮ ದೇಶ ಉಳಿದರೆ ನಾವು ಉಳಿವೆವು ಎಂಬುದು ಮಲ್ಲಿಕಾರ್ಜುನ ಶ್ರೀಗಳ ವಾಣಿಯಾಗಿತ್ತು. ಜಯವಿಭವ ಶ್ರೀಗಳು ಯುದ್ಧದ ಸಂದರ್ಭ ದಲ್ಲಿ ಚಿನ್ನಾಭರಣ ಮತ್ತು ಧನವನ್ನು ರಕ್ಷಣಾನಿಧಿಗೆ ಸಮರ್ಪಿಸಿ ಶ್ರೀ ಮಠದ ಗೌರವ-ಘನತೆ ಹೆಚ್ಚಿಸಿದ್ದರು. ಅವರು ಬಹುಬಾಷಾ ಪಂಡಿತರಾಗಿದ್ದರು ಎಂದು ತಿಳಿಸಿದರು.
ಕೃಷಿ ಕಡೆ ಒಲವು ಹೊಂದಿದ್ದ ಅವರು, ಶ್ರೀಮಠದ ಪಕ್ಕದಲ್ಲಿ ತೋಟ ಮಾಡಿದ್ದರು. ಅಲ್ಪ ಕಾಲಾವಧಿಯಲ್ಲಿ ಶ್ರೀಮಠವನ್ನು ಅಭಿವೃದ್ಧಿಪಡಿಸಿದರು. ಬೆಂಗಳೂರಿನಲ್ಲಿ ಸರ್ಪಭೂಷಣ ಮಠ ಸ್ಥಾಪಿಸಿದರು. ಹಾಸನ, ಚಿಕ್ಕಜಾಜೂರಿನಲ್ಲಿ ವಿದ್ಯಾರ್ಥಿ ನಿಲಯಕ್ಕಾಗಿ ನಿವೇಶನ ಖರೀದಿಸಿದ್ದರು ಎಂದರು.
ಕುಡಾ ಆಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ನಮ್ಮ ಕುಟುಂಬ ಹಿಂದಿನಿಂದಲೂ ಶ್ರೀಮಠದೊಂದಿಗೆ ಉತ್ತಮ ಭಾಂದವ್ಯ ಹೊಂದಿದೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ. ವೀರೇಶ್ ಮಾತನಾಡಿ, ಶ್ರೀಮಠ ನವಕೋಟಿ ನಾರಾಯಣ ಪೀಠವೆಂದು ಪ್ರಸಿದ್ಧಿ ಪಡೆದಿತ್ತು. ಜಯವಿಭವ ಶ್ರೀಗಳು ಮಾನವೀಯ ಗುಣವುಳ್ಳವರಾಗಿದ್ದರು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ, ಚಂದ್ರವಳ್ಳಿ ಎಸ್‌ಜೆಎಂ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್. ಪಂಚಾಕ್ಷರಿ ಮಾತನಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ. ನಿರಂಜನಮೂರ್ತಿ, ವೀರಶೈವ ಸಮಾಜದ ನಿರ್ದೇಶಕ ಎಸ್. ಪರಮೇಶ್, ಬಸವರಾಜಕಟ್ಟಿ, ಪೈಲ್ವಾನ್ ತಿಪ್ಪೇಸ್ವಾಮಿ, ಹರಗುರು ಚರಮೂರ್ತಿಗಳು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಡಾ. ಆನಂದ್ ಸ್ವಾಗತಿಸಿ,ನವೀನ್ ಮಸ್ಕಲ್ ವಂದಿಸಿದರು. ಡಾ.ರೇವಣ್ಣ ನಿರೂಪಿಸಿದರು.