ಬೇಲೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬೇಲೂರು ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿಗೆ ಶುಕ್ರವಾರ ರಾತ್ರಿ ಹೆಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಉದ್ಘಾಟಿಸಿದರು.
ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಹೆಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ಬೇರೆಲ್ಲೋ ನಡೆಯುತಿದ್ದ ಕಬಡ್ಡಿ ಪಂದ್ಯಗಳನ್ನು ಟಿವಿ, ಮೊಬೈಲ್‌ಗಳಲ್ಲಿ ನೋಡುತಿದ್ದೆವು. ಆದರೆ ಇಂದು ಬೇಲೂರಿನಲ್ಲಿ ಹಬ್ಬದ ವಾತಾವರಣ ನಿರ್ಮಿಸಿ ಹೀಗೂ ಪಂದ್ಯಾವಳಿ ಮಾಡಬಹುದು ಎಂಬುದನ್ನು ಯುವಕರು ತೋರಿಸಿದ್ದಾರೆ. ಇಂತಹ ಕ್ರೀಡಾ ಕೂಟಗಳು ಇನ್ನೂ ಹೆಚ್ಚು ನಡೆಯಲಿ. ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಪಟ್ಟದಲ್ಲಿ ಭಾಗವಹಿಸಿ ಬೇಲೂರಿನ ಕೀರ್ತಿ ಪತಾಕೆ ಹಾರಿಸುವ ಕೆಲಸ ಮಾಡಲಿ. ಜತೆಗೆ ರಾಷ್ಟ್ರೀಯ ಕ್ರೀಡಾ ಪಟುಗಳೊಂದಿಗೆ ಸ್ಥಳೀಯ ತಂಡದ ಆಟಗಾರರು ಭಾಗವಹಿಸಿ ಹೆಚ್ವಿನ ಅನುಭವ ಪಡೆದು ಅವರಂತೆ ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬೇಕು ಎಂದರು.
ಹಿರಿಯ ಕ್ರೀಡಾಪಟು ಹಾಗೂ ವೈಡಿಡಿ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯೆ ಸೌಮ್ಯ ಆನಂದ್ ಮಾತನಾಡಿ, ಮಹಿಳೆಯರು ಪುರುಷರಿಗಿಂತ ಏನು ಕಮ್ಮಿ ಇಲ್ಲ ಎಂಬುದನ್ನು ಇಂದಿನ ಯುವತಿಯರು ಮತ್ತು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತಿದ್ದಾರೆ. ಅದೇ ರೀತಿ ಕಬಡ್ಡಿ ಪಂದ್ಯದಲ್ಲೂ ಭಾಗವಹಿಸಿ ಉತ್ತಮ ಸಾಧನೆ ಮಾಡುತಿದ್ದಾರೆ. ಅದರಲ್ಲೂ ಬೇಲೂರಿನಲ್ಲಿ ಇಂತಹ ಕಬಡ್ಡಿ ಪಂದ್ಯಾವಳಿಯನ್ನು ಬೇಲೂರು ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು ಆಯೋಜಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಬೇಲೂರು ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಿ.ಹೆಚ್.ಮಹೇಶ್, ಕಾರ್ಯದರ್ಶಿ ಅಬ್ದುಲ್ ಖಾದರ್, ಉಪಾಧ್ಯಕ್ಷ ಮಹೇಶ್, ಖಜಾಂಚಿ ಎ.ಆರ್.ಕರೀಗೌಡ, ನಿರ್ದೇಶಕರಾದ ಜಯರಾಂ, ಭರತ್, ಕರವೇ ತಾ.ಅಧ್ಯಕ್ಷ ಭೋಜೇಗೌಡ, ಜಿಪಂ ಮಾಜಿ ಸದಸ್ಯ ಅಮೀತ್ ಶೆಟ್ಟಿ, ತಾಪಂ ಮಾಜಿ ಸದಸ್ಯ ಶಶಿಕುಮಾರ್, ಕಸಾಪ ಮಾಜಿ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ, ಸರ್ವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಹೆಚ್.ಪ್ರಕಾಶ್, ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ದಿನೇಶ್, ಪ್ರತಾಪ, ನಾಗರಾಜು, ವಿಜಯ್ ಕುಮಾರ್, ಅಶ್ವಥ್ ಇದ್ದರು.