ಜಿಲ್ಲೆ

ರಾಷ್ಟ್ರ ನಿರ್ಮಾಣಕ್ಕೆ ಸಂಸ್ಕೃತಿ ಆಧಾರವಾಗಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾವೆಲ್ಲ ಒಂದು ನಾವೆಲ್ಲ ಬಂಧು ಎಂಬ ಧ್ಯೇಯವನ್ನೇ ರಾಷ್ಟ್ರೀಯತೆ ಸಾರುತ್ತದೆ. ಈ ವಚನಕ್ಕೆ ಸದಾ ಬದ್ಧರಾಗಿರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು.
ನಗರದ ಸರಸ್ವತಿ ನಿಕೇತನ ಸಭಾಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಗುರುವಾರ ಏರ್ಪಡಿಸಿದ್ದ ರಕ್ಷಾ ಬಂಧನ ಉತ್ಸವದಲ್ಲಿ ಅವರು ಮಾತನಾಡಿದರು.
ಭಾರತದ ಹಬ್ಬಗಳ ದೇಶ. ನಮ್ಮ ಹಬ್ಬಗಳಿಗೆ ಹಲವು ವಿದೇಶಗಳಲ್ಲೂ ರಜೆ ಘೋಷಿಸಲಾಗಿದೆ. ಇದು ಭಾರತದ ಹಿರಿಮೆ. ರಕ್ಷಾಬಂಧನ ದೇಶದೆಲ್ಲೆಡೆ ಆಚರಿಸುವುದರಿಂದ ಇದೊಂದು ರಾಷ್ಟ್ರೀಯ ಉತ್ಸವವಾಗಿದೆ. ಭಾರತ ಪ್ರಾಚೀನ ರಾಷ್ಟ್ರ. ಭಾಷೆ, ಸಂಸ್ಕೃತಿ, ನಾಗರಿಕತೆ, ಇತರ ಕ್ಷೇತ್ರಗಳಲ್ಲಿ ಜಗತ್ತಿಗೆ ಮಾದರಿ. ಆದರೆ ಪಾಶ್ಚಾತ್ಯರ ನಕಾರಾತ್ಮಕ ಪರಿಕಲ್ಪನೆ ಹೇರಿಕೆಯಿಂದ ಸ್ವಾಭಿಮಾನ ಶೂನ್ಯರಾದೆವು ಎಂದರು.
ರಾಷ್ಟ್ರ ನಿರ್ಮಾಣ ರಾಜಕೀಯ ವ್ಯವಸ್ಥೆಯಿಂದ ಆಗುವುದಿಲ್ಲ. ರಾಮಾಯಣದಲ್ಲಿದ್ದ ರಾಷ್ಟ್ರೀಯತೆ ಮಹಾಭಾರತದಲ್ಲಿ ಇರಲಿಲ್ಲ. ಹೀಗಾಗಿ ಅಣ್ಣ ತಮ್ಮಂದಿರ ನಡುವೆ ಯುದ್ಧವಾಯಿತು. ಜನನಿ-ಜನ್ಮಭೂಮಿ ಸ್ವರ್ಗಕ್ಕೆ ಸಮ ಎಂದು ಹೇಳಿದ ಶ್ರೀರಾಮ ರಾಷ್ಟ್ರ ಪುರುಷ, ಮರ್ಯಾದಾ ಪುರುಷೋತ್ತಮ ಎಂದೆನಿಸಿಕೊಂಡ. ಸಂಸ್ಕಾರದಿಂದ ಮನುಷ್ಯತ್ವ, ದೈವತ್ವ ಸಾಧಿಸಬಹುದು. ಹರಿಶ್ಚಂದ್ರನ ಸತ್ಯಶ್ರದ್ಧೆ ನಮಗೆ ಇಂದಿಗೂ ಆದರ್ಶ ಎಂದರು.
ಲೋಕಮಾನ್ಯ ತಿಲಕರು ಆಂದೋಲನ, ಸ್ವರಾಜ್ಯ ಕಲ್ಪನೆ, ಗಣೇಶೋತ್ಸವ, ಶಿವಾಜಿ ಜಯಂತಿ ಮೂಲಕ ಸಾಂಸ್ಕೃತಿಕ ರಾಷ್ಟ್ರೀಯತೆ ಪುನರ್ ಸ್ಥಾಪಿಸಿದರು. ದೇಶದ ಇಂಚಿಂಚೂ ಜಾಗದ ರಕ್ಷಣೆಗೆ ಪ್ರಾಣಾರ್ಪಣೆಗೈದ ಅನೇಕರು ನಮಗೆ ಆದರ್ಶಪ್ರಾಯರಾಗಿದ್ದಾರೆ. ದೇಶದ ಸಂಪತ್ತು ಕೇವಲ ಭೋಗಕ್ಕಾಗಿ ಅಲ್ಲ. ದೇಶ ನಮಗೆ ಸಾಕಷ್ಟು ಕೊಡುವಾಗ ಅದಕ್ಕೆ ನಮ್ಮ ಕೊಡುಗೆ ಕೊಡುವುದು ಅವಶ್ಯ. ಜಾತಿ, ಹಣ, ಪ್ರಾದೇಶಿಕತೆ, ಹೆಸರು ಹೊರತುಪಡಿಸಿ ಸಂಸ್ಕೃತಿ ಆಧಾರದ ಮೇಲೆ ರಾಷ್ಟ್ರ ನಿರ್ಮಾಣವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಕ್ರಾಂತ ಸೆಹಗಲ್ ಮಾತನಾಡಿ, ಭಾರತ ಜ್ಞಾನಶಾಲಿ ದೇಶ. ವಸುದೈವ ಕುಟುಂಬಕಂ ಎಂದು ಹೇಳಿದವರು ನಾವು. ಆಧ್ಯಾತ್ಮ ಹಿನ್ನೆಲೆಯುಳ್ಳ ಭಾರತ ಇಂದು ವಿಶ್ವ ಶಕ್ತಿಯಾಗುತ್ತಿದೆ ಎಂದರು.
ನಗರದ ಗಣ್ಯರು, ಸಂಘದ ಹಿತೈಷಿಗಳು, ಇತರರು ಇದ್ದರು.