ಮುನವಳ್ಳಿ: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ವ್ಯಕ್ತಿಯನ್ನು ಬದಲಿಸುವ ಶಕ್ತಿ ಗುರುಗಳಿಗಿದೆ. ಶಿಕ್ಷಕರು ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಬೇಕು ಎಂದು ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಅನ್ನದಾನೇಶ್ವರ ಪ.ಪೂ.ಮಹಾವಿದ್ಯಾಲಯದಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೋಮಶೇಖರಮಠದಿಂದ ಕೊಡಲ್ಪಡುವ ‘ಶ್ರೇಷ್ಠ ಗುರು ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ನೈತಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಿ, ಉತ್ತಮ ರಾಷ್ಟ್ರನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಅನ್ನದಾನೇಶ್ವರ ಪ.ಪೂ. ಕಾಲೇಜು ಉಪನ್ಯಾಸಕರಾದ ಜಿ.ಜಿ.ಲಮಾಣಿ, ಮಂಜುಳಾ ಭಾಂಡೇಕರ, ಅಜ್ಜಪ್ಪ ಗಡಮಿ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಶೈಲ ಗೋಪಶೆಟ್ಟಿ, ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ ಶಿಕ್ಷಕಿ ಶೋಭಾ ಆಲಗುಂಡಿ, ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ದೈಹಿಕ ಶಿಕ್ಷಕ ಸದಾನಂದ ತುಡವೇಕರ ಹಾಗೂ ಆರ್.ಬಿ.ಯಲಿಗಾರ, ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನಯ್ಯ ಚುಳಕಿಮಠ ಅವರಿಗೆ ಶ್ರೇಷ್ಠ ಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಭವಾನಿ ಖೊಂದುನಾಯ್ಕ ಅವರನ್ನು ಸನ್ಮಾನಿಸಲಾಯಿತು. ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶ್ರೀಶೈಲ ಗೋಪಶೆಟ್ಟಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಎಂ.ಎನ್.ಜಮಖಂಡಿ, ಶಂಕರ ಗಯ್ಯಳಿ, ಈರಣ್ಣ ಸಂಕಣ್ಣವರ, ಗಂಗಾಧರ ಗೊರಾಬಾಳ, ಪ್ರಾಚಾರ್ಯರಾದ ಎಂ.ಎಚ್.ಪಾಟೀಲ, ಕೆ.ಬಿ.ನಲವಡೆ, ಶಂಕರ ಅಪ್ಪೋಜಿ, ಮೋಹನ ಕಾಮಣ್ಣವರ, ಶಿಕ್ಷಕ ಬಿ.ಬಿ.ಹುಲಿಗೊಪ್ಪ, ಐ.ಕೆ.ಮಠಪತಿ ಇತರರಿದ್ದರು.