ಜಿಲ್ಲೆ

ರಾಷ್ಟ್ರ ಅಭಿವೃದ್ಧಿಯಲ್ಲಿ ಯುವಕರು ಮುಖ್ಯ

ಬಳ್ಳಾರಿ : ದೇಶದ ಉಜ್ವಲ ಭವಿಷ್ಯ ರೂಪಿಸುವಲ್ಲಿ ಯುವಪೀಳಿಗೆಯು ಕೈಜೋಡಿಸಲು ಒಂದಾಗಬೇಕಿದೆ ಎಂದು ದೂರದರ್ಶನ ಕೇಂದ್ರದ ನಿ. ಉಪನಿರ್ದೇಶಕ ಡಾ.ಸುಧಾಕರರಾವ್ ಹೇಳಿದರು.
ನಗರ ವೀರಶೈವ ಕಾಲೇಜಿನಲ್ಲಿ ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವೀರಶೈವ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಮಾತನಾಡಿದರು. ಒಂದು ದೇಶವು ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಸಾಧನೆಯ ಪಥದತ್ತ ಸಾಗಲು ಯುವಕರು ಕಾರ್ಯಪ್ರವೃತ್ತರಾಗಬೇಕು. ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಅಭಿಪ್ರಾಯ ಕೂಡ ಮುಖ್ಯವಾಗಿದ್ದು, ಸಮಾಜ ಒಳಿತಿಗಾಗಿ ಉತ್ತಮ ಚಿಂತನೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ಕಿವಿಮಾತು ಹೇಳಿದರು. ಭಾರತ ದೇಶವು 2047ರ ವೇಳೆಗೆ ಸ್ವಾತಂತ್ರೃದ ಸವಿನೆನಪಿಗಾಗಿ ಶತಮಾನದ ಅಮೃತ ಮಹೋತ್ಸವ ಆಚರಣೆಗೆ ಉತ್ಸುಕತೆಯಿಂದ ಕೂಡಿದ್ದು, ಮುಂಬರುವ ಅಮೃತ ಕಾಲಕ್ಕಾಗಿ ಅಮೃತ ಪೀಳಿಗೆಯು ಸಮರ್ಪಣ ಭಾವದ ಯೋಚನೆಯೊಂದಿಗೆ ಸಿದ್ಧರಿರಬೇಕು ಎಂದು ಕರೆ ಹೇಳಿದರು.