ಜಿಲ್ಲೆ

ರಾಷ್ಟ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಿ

ಕಲಬುರಗಿ: ತ್ಯಾಗ, ಬಲಿದಾನ ಮಾಡಿದ ಮಹಾತ್ಮಗಾಂಧಿ ಸೇರಿ ಅನೇಕ ಮಹನೀಯರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ ದೊರೆತಿದೆ. ಇದನ್ನು ಉಳಿಸಿಕೊಂಡು ರಾಷ್ಟ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ ನೀಡಿದರು.
ನೂತನ ವಿದ್ಯಾಲಯ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಡಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟಿಯ ಪ್ರಜಾಪ್ರಭುತ್ವ ದಿನ, ಭಾರತ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ, ಸರ್ವಜನರ ಏಕ ಧ್ವನಿ, ಸಮಾನತೆಗಾಗಿ ಪ್ರಜಾಪ್ರಭುತ್ವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೂಢನಂಬಿಕೆ ಹೋಗಲಾಡಿಸಿದ್ದಾರೆ. ಸಂವಿಧಾನ ರಚಿಸಿ ಎಲ್ಲರೂ ಸಮಾನರು ಎಂಬ ಸಂದೇಶ ನೀಡಿದ್ದಾರೆ. ಸಂವಿಧಾನದ ಫಲವಾಗಿ ಗ್ರಾಮ, ತಾಲೂಕು ಮತ್ತು ಜಿಲ್ಲೆಗಳಲ್ಲಿ ಅಧಿಕಾರ ನಡೆಸಲು ಸಾಧ್ಯವಾಗಿದೆ. ಪ್ರತಿಯೊಬ್ಬರೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಸಮಾನತೆ, ಸಹೋದರತ್ವ, ನೆಮ್ಮದಿ ದೊರಕಲು ಸಂವಿಧಾನ ಕಾರಣ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜತೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ ಮಾತನಾಡಿ, ಸಂವಿಧಾನ ಪೀಠಿಕೆ ಪ್ರಜಾಪ್ರಭುತ್ವ ಎಂಬುದು ಹೊಸ ಪೀಳಿಗೆಗೆ ಅರ್ಥವಾಗಬೇಕಿದೆ ಎಂದು ಹೇಳಿದರು.
ಮಳಖೇಡದ ಮುರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕ ಲೋಹಿತ್ ಪೂಜಾರಿ ಸಂವಿಧಾನ ಪೀಠಿಕೆ ಕುರಿತು ಕಿರು ಪರಿಚಯ ನೀಡಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ್ ಭಾರತ ಸಂವಿಧಾನ ಪ್ರಸ್ತಾವನೆ ಬೋಧಿಸಿದರು.
ಶಾಸಕ ಬಸವರಾಜ ಮತ್ತಿಮಡು, ಡಿಸಿ ಬಿ.ಫೌಜಿಯಾ ತರನ್ನುಮ್, ಜಿಪಂ ಸಿಇಒ ಭನ್ವರ್‌ಸಿಂಗ್ ಮೀನಾ, ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ.ಆಕಾಶ್ ಎಸ್., ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಅಪರ ಡಿಸಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಮಮತಾಕುಮಾರಿ ಇತರರಿದ್ದರು. ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ್ ಸ್ವಾಗತಿಸಿದರು. ಕೋಡ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಡಾ.ರಾಜಶೇಖರ ಮಾಂಗ ನಿರೂಪಣೆ ಮಾಡಿದರು. ಹೆಬ್ಬಾಳ ಮುರಾರ್ಜಿ ಶಾಲೆಯ ಶಿವರಾಮ ಚವ್ಹಾಣ್ ವಂದಿಸಿದರು.