ಜಿಲ್ಲೆ

ರಾಯಣ್ಣ ಪ್ರತಿಮೆ ಸ್ಥಾಪನೆಗೆ ಸ್ಥಳಾವಕಾಶ ಕೊಡಿ

ಕಲಬುರಗಿ: ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಸ್ಥಳಾವಕಾಶ ಮಾಡಿಕೊಡಲು ಮಹಾನಗರ ಪಾಲಿಕೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಆರ್.ವರ್ತುರು ಪ್ರಕಾಶ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಾಡಿದ ತ್ಯಾಗ, ಬಲಿದಾನ ಯುವ ಜನಾಂಗಕ್ಕೆ ಮಾರ್ಗದರ್ಶನ ಹಾಗೂ ಆದರ್ಶ ಮಾದರಿಯಾಗಿದ್ದು, ಯುವ ಸಮೂಹದ ಪ್ರೇರಣೆಗೆ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಸ್ಥಾಪನೆಗೆ ಅವಕಾಶ ಕಲ್ಪಿಸಬೇಕು ಎಂದು ಸಂಘದ ಅಧ್ಯಕ್ಷ ಶಿವಾಜಿ.ಎಸ್. ಪಟ್ಟಣ ಆಗ್ರಹಿಸಿದರು.
ಆಗಸ್ಟ್ 15ರಂದು ರಾಯಣ್ಣ ಜನ್ಮ. ಆ ದಿನ ಎಲ್ಲ ಶಾಲಾ, ಕಾಲೇಜುಗಳಲ್ಲಿ, ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸುವಂತಾಗಲು ಸೂಕ್ತ ಆದೇಶ ಹೊರಡಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಗುಂಡಪ್ಪ ಇವಣಿ, ಹಣಮಂತಪ್ಪಾ ಹಿರೇಮನಿ, ನಾಗಪ್ಪ ಪೂಜಾರಿ, ಶ್ರೀಕಾಂತ ಪೂಜಾರಿ ಆಜಾದಪೂರ, ಶಿವಲಿಂಗಪ್ಪ ಕಟ್ಟಿಮನಿ, ಮಲ್ಲು ಆಲಗೂಡ, ರುಕ್ಕಪ್ಪ ಕಾಂಬಳೆ, ರವಿ ಪೂಜಾರಿ, ಬಾಬುರಾವ ಪೂಜಾರಿ, ಅಮೀರ್ ಅದಾಫ್, ಶಿವಲಿಂಗಪ್ಪ ಯಳಸಂಗಿ ಇದ್ದರು.