ತೀರ್ಥಹಳ್ಳಿ: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಡಿ.ಎಸ್.ವಿಶ್ವನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.
ರಾಮೇಶ್ವರ ದೇವಸ್ಥಾನ ಕಲ್ಯಾಣ ಮಂದಿರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ನಾಗಭೂಷಣ ಮತ್ತು ವರಲಕ್ಷ್ಮೀಯವರ ಉಪಸ್ಥಿತಿಯಲ್ಲಿ ಡಿ.ಎಸ್.ವಿಶ್ವನಾಥ ಶೆಟ್ಟಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. 9 ಮಂದಿ ಸದಸ್ಯರಲ್ಲಿ ಶಶಿಧರ ಹಂದೆ ಹೊರತುಪಡಿಸಿ ಉಳಿದವರು ಹಾಜರಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಡಿ.ಎಸ್.ವಿಶ್ವನಾಥ ಶೆಟ್ಟಿ, ದೇವಸ್ಥಾನದ ಸುತ್ತಲಿನ ಪೌಳಿ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ತುರ್ತಾಗಿ ಆಗಬೇಕು. ದೇವಸ್ಥಾನದ ಖಾತೆಯಲ್ಲಿ ಸಾಕಷ್ಟು ಹಣವಿದ್ದು, ಮಲೆನಾಡು ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡರು ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.
ಸಮಿತಿ ಸದಸ್ಯರುಗಳಾದ ರಾಜಶೇಖರ ಭಟ್, ಎಚ್.ಆರ್.ಮಹಾಬಲ, ಹಾಲಿಗೆ ನಾಗರಾಜ್, ಪ್ರದೀಪ್, ಪೂರ್ಣೆಶ್, ತ್ರಿವೇಣಿ ಸುರೇಶ್, ಜ್ಯೋತಿ ಇದ್ದರು.