ಜಿಲ್ಲೆ

ರಾಮರಾಜ್ಯಕ್ಕೆ ಸಮತೋಲನ ಅಗತ್ಯ

ಹುಬ್ಬಳ್ಳಿ: ರಾಮರಾಜ್ಯ ಸಾಕಾರಕ್ಕೆ ಪರಿಸರ, ಜೀವ ವೈವಿಧ್ಯತೆ, ಆರ್ಥಿಕತೆ, ನೈತಿಕತೆ ಮಧ್ಯ ಸಮತೋಲನ ಕಾಪಾಡುವ ಅವಶ್ಯಕತೆ ಇದೆ ಎಂದು ಭಾರತ ವಿಕಾಸ ಸಂಗಮದ ಪೋಷಕ, ಚಿಂತಕ ಕೆ.ಎನ್. ಗೋವಿಂದಾಚಾರ್ಯ ಹೇಳಿದರು.

ಭಾರತ ವಿಕಾಸ ಸಂಗಮ, ಕೆಎಲ್​ಇ ಸಂಸ್ಥೆ, ಅಮೆರಿಕದ ಯೋಗ ವಿಶ್ವವಿದ್ಯಾಲಯ, ಹುಬ್ಬಳ್ಳಿಯ ಲೆಕ್ಕ ಪರಿಶೋಧನಾ ಸಂಸ್ಥೆ, ಕನಕದಾಸ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಗರದ ಬಿವಿಬಿ ಕಾಲೇಜ್​ನ ಐಎಂಎಸ್​ಆರ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅರ್ಥ ವ್ಯವಸ್ಥೆ ಮತ್ತು ದೇಶ ಭಕ್ತಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತಾಡಿದರು.

ರಾಮರಾಜ್ಯಕ್ಕೆ ನಾಲ್ಕು ವಿಚಾರಗಳ ಸಮತೋಲನದ ಜತೆಗೆ ರಾಮನ ನಾಮ, ರಾಮನ ಕೆಲಸ ಮಾಡುವ ಕಾರ್ಯವಾಗಬೇಕು. ದೇಶದ ರಾಜ ನೀತಿ-ಆರ್ಥಿಕನೀತಿ ಮರು ರಚನೆಯಾಗಬೇಕಿದೆ. ಪರಿಸರ ಕೇಂದ್ರಿತ ಅಭಿವೃದಿಟಛಿಯತ್ತ ನಾವೆಲ್ಲ ಗಮನ ಹರಿಸಬೇಕಿದೆ. ಅದು ಬಿಟ್ಟು ಜಿಡಿಪಿ ಆಧಾರವಲ್ಲ ಎಂದರು.

ನಗರೀಕರಣದಿಂದಾಗಿ ದೇಶದ 9 ಸಾವಿರ ಹಳ್ಳಿಗಳು ನಾಶವಾಗಿವೆ. ಉತ್ತಮ ಯೋಜನೆಗಳ ಕೊರತೆಯಿಂದ ಗ್ರಾಮಗಳು ಕಣ್ಮರೆಯಾದಂತಾಗಿದೆ. ದೇಶದ ಭವಿಷ್ಯಕ್ಕೆ ಉತ್ತಮ ಯೋಜನೆಗಳ ಅವಶ್ಯಕತೆಯಿದೆ. ಸರ್ಕಾರದಿಂದ ದೇಶದ ಅಭಿವೃದಿಟಛಿಯಾಗಿಲ್ಲ. ದೇಶದಲ್ಲಿರುವವರ ಸಂಸ್ಕಾರದಿಂದ ದೇಶ ಮುನ್ನಡೆದಿದೆ. ಪ್ರಸ್ತುತ ಕಂಡು ಬರುತ್ತಿರುವ ಆತ್ಮ ವಿಸ್ಮೃ, ಸದ್ಗುಣ ವಿಕೃತಿ ದೂರವಾಗಬೇಕು. ಜೀವ, ಜಗತ್, ಜಗದೀಶ ಎಂಬ ತತ್ತ್ವ ಪಸರಿಸಬೇಕು ಎಂದು ತಿಳಿವಳಿಕೆ ನೀಡಿದರು.

ವಿದ್ಯಾವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಯೋಗ, ಭಕ್ತಿ ಬೇರೆ ಬೇರೆ ಅಲ್ಲ. ಯೋಗ ಸಫಲವಾಗಲೂ ಭಕ್ತಿ ಅವಶ್ಯ. ಒಂದಕ್ಕೊಂದು ಪೂರಕವಾಗಿವೆ. ವಿದೇಶಗಳು ವೃದಟಛಿರ ಬೀಡಾಗುತ್ತಿವೆ. ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದ್ದರೂ ಮಾರ್ಗದರ್ಶನದ ಕೊರತೆಯಿದೆ. ಭಕ್ತಿ ಅನುಸರಿಸಿ ಸಾಧನೆಯತ್ತ ಹೆಜ್ಜೆ ಹಾಕಬೇಕಿದೆ ಎಂದರು.

ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಸಂಪಾದಿಸಿರುವ ‘ಹರಿದಾಸರ 10 ಸಾವಿರ ಹಾಡುಗಳು’ ಕೃತಿ ಲೋಕಾರ್ಪಣೆ ಮತ್ತು ಅಮೆರಿಕ ಯೋಗ ವಿಶ್ವವಿದ್ಯಾಲಯದ ಉತ್ತರ ಕರ್ನಾಟಕ ಪ್ರಾದೇಶಿಕ ಅಧ್ಯಯನ ಕೇಂದ್ರ ಕಚೇರಿಯನ್ನು ಉದ್ಘಾಟಿಸಲಾಯಿತು.

ಕರ್ನಾಟಕ ಕಾನೂನು ವಿವಿ ಕುಲಪತಿ ಡಾ. ಈಶ್ವರ ಭಟ್, ಅಮೆರಿಕ ಯೋಗ ವಿವಿ ಕುಲಪತಿ ಡಾ. ಯೋಗಿ ದೇವರಾಜ, ಕಲಬುರ್ಗಿ ವಿವಿ ವಿಶ್ರಾಂತ ಕುಲಪತಿ ಡಾ. ಪರಿಮಳ ಅಂಬೇಕರ, ಸುಧೀಕ್ಷಾ ಗ್ರುಪ್ ಆಫ್ ಇಂಡಸ್ಟ್ರೀ ಚೇರ್ಮನ್ ಡಾ. ಸುಬ್ರಹ್ಮಣ್ಯ ಶರ್ವ, ಅಮೆರಿಕ ಯೋಗ ವಿವಿ ಡೀನ್ ಡಾ. ಸೆಲ್ವರಾಜ್ ನಾರಾಯಣ, ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕನಕದಾಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶಾಂತಣ್ಣ ಕಡಿವಾಳ, ಲಘು ಉದ್ಯೋಗ ಭಾರತಿ ರಾಜ್ಯ ಕಾರ್ಯದರ್ಶಿ ಪ್ರಿಯಾ ಪುರಾಣಿಕ, ಕೃಷಿ ಪಂಡಿತ ಶ್ರೀನಿವಾಸಮೂರ್ತಿ ಕೊರ್ಲಹಳ್ಳಿ, ರಾಜ್ಯ ಸಂಚಾಲಕ, ಲೆಕ್ಕ ಪರಿಶೋಧಕ ಡಾ. ಸಿ.ಆರ್. ಢವಳಗಿ ಇತರರು ಉಪಸ್ಥಿತರಿದ್ದರು.