ಹಾಸನ: ರಾಮಮಂದಿರ ಎನ್ನೋದು ಭಾರತದ ಕೋಟ್ಯಂತರ ಜನರ ಭಾವನಾತ್ಮಕ ಸಂಬಂಧ, ಅದರಲ್ಲಿ ರಾಜಕಾರಣ ಮಾಡುತ್ತೇವೆ ಎನ್ನುವುದಾದರೆ ಅದರಂತಹ ಮೂರ್ಖತನ ಇನ್ನೊಂದಿಲ್ಲ ಎಂದು ಕಾಂಗ್ರಸ್‌ಗೆ ಸಂಸದ ಪ್ರಜ್ವಲ್ ರೇವಣ್ಣ ಟಾಂಗ್ ನೀಡಿದರು.
ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ಕಾಂಗ್ರೆಸ್ ಹೊರಗುಳಿಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಸಂಸದರಿಗೂ ಆಹ್ವಾನ ಕೊಟ್ಟಿದ್ದಾರೆ. ವಿಶೇಷವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಪ್ರಧಾನಮಂತ್ರಿ ಅವರು ಖುದ್ದಾಗಿ ಆಹ್ವಾನ ನೀಡಿದ್ದಾರೆ. ಪ್ರಧಾನಮಂತ್ರಿ ಆಹ್ವಾನ ಮಾಡಿದ್ದಾರೆ ಖಂಡಿತವಾಗಿಯೂ ನಾನು ಹೋಗುತ್ತೇನೆ ಎಂದು ಡಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ನಿರ್ಣಯ ಅವರ ಪಕ್ಷಕ್ಕೆ ಬಿಟ್ಟದ್ದು, ಅವರ ನಿರ್ಣಯ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು 2024ರ ಲೋಕಸಭೆ ಚುನಾವಣೆಯಲ್ಲಿ ನೋಡಬೇಕು. ರಾಮಮಂದಿರ ನಿರ್ಮಾಣಕ್ಕೆ ಸಹಕಾರ ನೀಡುತ್ತೇನೆ ಎಂದು ಕಾಂಗ್ರೆಸ್ ನವರು ಹೇಳಿದ್ದರು. ಈಗ ಕೇಂದ್ರ ಕಾಂಗ್ರೆಸ್ ಬೇರೆ ರೀತಿ ಹೇಳುತ್ತಿದೆ, ರಾಜ್ಯ ಕಾಂಗ್ರೆಸ್ ಬೇರೆ ರೀತಿ ಹೇಳುತ್ತಿದೆ. ಇಂಡಿಯಾ ಒಕ್ಕೂಟದಲ್ಲಿ ಒಗ್ಗಟ್ಟಿಲ್ಲ ಎಂಬುದು ಅನೇಕ ವಿಷಯಗಳಲ್ಲಿ ಎದ್ದು ಕಾಣುತ್ತಿದೆ ಎಂದರು.
ನಿತಿಶ್‌ಕುಮಾರ್ ಸಭೆಯಿಂದ ಹೊರಗೆ ಹೋಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತೇವೆ ಎಂದಾಗ ಸ್ವಪಕ್ಷದಲ್ಲೇ ಆ ಜನಾಂಗಕ್ಕೆ ಬೆಂಬಲ ನೀಡಿತ್ತಿಲ್ಲ. ಇಂಡಿಯಾ ಒಕ್ಕೂಟದಲ್ಲಿ ಹೊಂದಾಣಿಕೆ ಇಲ್ಲ ಎಂಬುದು ಎದ್ದು ಕಾಣುತ್ತಿದೆ. ಖಂಡಿತವಾಗಿಯೂ 2024 ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟ ವಿಫಲವಾಗಿ, ಎನ್‌ಡಿಎ ಅಧಿಕಾರಕ್ಕೆ ಬರುವುದು ಕಾಣಿಸುತ್ತಿದೆ ಎಂದು ಹೇಳಿದರು.
ಎಟಿಆರ್ ಪ್ರತಿಭಟನೆಗೆ ಕಾಂಗ್ರೆಸ್ ಕುಮ್ಮಕ್ಕು :
ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಏನೇನು ಮಾಡಬೇಕು ಮಾಡುತ್ತಿದ್ದಾರೆ. ರಾಜಕೀಯ ಎಂದ ಮೇಲೆ ಇವೆಲ್ಲ ಇರುತ್ತವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರು ಹೇಳಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರಿಗೆ ತಮ್ಮ ಮಾಜಿ ಕಾರು ಚಾಲಕ ಕಾರ್ತಿಕ್ ಆರೋಪ ಹಾಗು ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆರೋಪ ಮಾಡಿರುವವರೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ. ಕೋರ್ಟ್ಗೆ ಹೋಗುವವರು ಮಾಧ್ಯಮದ ಮುಂದೆ ಬರುವುದು ಏನಿದೆ? ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವಾಗ ಹೀಗೆಲ್ಲ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಪ್ರಕರಣ 8-9 ತಿಂಗಳ ಹಿಂದೆ ನಡೆದಿದೆ ಎಂದು ಅವರೇ ಹೇಳಿದ್ದಾರೆ. ಆಗ ನಡೆದಿದ್ದನ್ನು ಈಗ ಏಕೆ ಮಾತನಾಡುತ್ತಿದ್ದಾರೆ? ನಾನು ಈ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಮಾಧ್ಯಮಗಳ ಮುಂದೆ ಕುಳಿತು ಒಬ್ಬರ ತೇಜೋವಧೆ ಮಾಡಬಾರದು. ಲೋಕಸಭೆ ಚುನಾವಣೆಯೇ ಅವರ ಅಜೆಂಡಾ ಎಂಬುವು ಸ್ಪಷ್ಟವಾಗಿ ತಿಳಿಯುತ್ತದೆ. ಯಾರು, ಯಾರ ಮೇಲೂ ಹಲ್ಲೆ ಮಾಡಲ್ಲ ಆಗುವುದಿಲ್ಲ. ಹಲ್ಲೆ ಮಾಡಿಸಿಕೊಂಡವರು 8 ತಿಂಗಳವರೆಗೂ ಸುಮ್ಮನೆ ಕೂರುವುದಿಲ್ಲ ಎಂದರು.
ಎ.ಟಿ.ರಾಮಸ್ವಾಮಿ ಅವರು ದೊಡ್ಡವರಿದ್ದಾರೆ, ಅವರು ಹಿರಿಯ ರಾಜಕಾರಣಿ. ಇಂತಹ ಹೋರಾಟಕ್ಕೆ ಬರುತ್ತಾರೆ ನಾನು ಏನು ಹೇಳಬೇಕು? ನಾನು ಅವರ ಬಗ್ಗೆ ಏನು ಚರ್ಚೆ ಮಾಡಲ್ಲ, ಅವರಿಗೆ ಮಾಹಿತಿ ಸರಿಯಾಗಿದ್ದರೆ ಹೋರಾಟ ಮಾಡಲಿ. ಇದರಲ್ಲಿ ಯಾರದ್ದು ತಪ್ಪು, ಯಾರದ್ದು ತಪ್ಪಿಲ್ಲ ಎಂದು ಇಡೀ ರಾಜ್ಯಕ್ಕೆ, ಇಡೀ ಜಿಲ್ಲೆಗೆ ಗೊತ್ತಿದೆ. ಇದರ ಬಗ್ಗೆ ಮುಂದುವರೆದು ಏನು ಮಾತನಾಡಲು ಹೋಗಲ್ಲ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಈ ಬಗ್ಗೆ ಮಾತನಾಡಿ ಎನ್ನುವ, ಬಲವಂತ ಮಾಡುವ ಅಧಿಕಾರ ನಿಮಗಿಲ್ಲ ಎಂದು ಮಾಧ್ಯಮದವರ ಮೇಲೆ ಗರಂ ಆದರು.