ಯಲ್ಲಾಪುರ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತೀಯನ ಶ್ರದ್ಧಾಭಕ್ತಿಯ ಸಂಕೇತವಾಗಿದ್ದು, ಈ ಮಂದಿರ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬರ ಸಹಕಾರ, ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿದೆ ಎಂದು ವಿಶ್ವ ಹಿಂದು ಪರಿಷತ್ನ ಶಿರಸಿ ವಿಭಾಗೀಯ ಪ್ರಚಾರಕ ಗಣೇಶ ತೆಕ್ಕಟ್ಟೆ ಹೇಳಿದರು.
ಆಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ವಕ್ತಾರರಾಗಿ ಅವರು ಮಾತನಾಡಿದರು.
ದೇಶದ ರಾಷ್ಟ್ರೀಯ ಸ್ಮಾರಕ, ಪ್ರಾಣಿ, ಪಕ್ಷಿ ಇರುವಂತೆಯೇ ಈ ರಾಮಮಂದಿರ ರಾಷ್ಟ್ರೀಯ ದೇವಾಲಯವೆಂದೆನಿಸಿಕೊಳ್ಳಬೇಕು ಎಂದರು.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ಅಭಿಯಾನ ಸಮಿತಿಗಳ ಆಶ್ರಯದಲ್ಲಿ ನಡೆಯುವ ಈ ಅಭಿಯಾನಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿವಾರು ಸಮಿತಿಗಳನ್ನು ರಚಿಸಲಾಯಿತು. ನಿಧಿ ಸಂಗ್ರಹದ ವಿಧಾನದ ಕುರಿತು ಮಾಹಿತಿ ನೀಡಿ, ಯಾವುದೇ ಮನೆ ತಪ್ಪದಂತೆ ಜಾಗೃತಿ ವಹಿಸಬೇಕೆಂದು ಸೂಚಿಸಲಾಯಿತು.
ವಿಶ್ವ ಹಿಂದು ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎನ್. ಭಟ್ಟ ಏಕಾನ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ನಾರಾಯಣ ನಾಯಕ, ತಾಲೂಕು ಸಹಕಾರ್ಯವಾಹ ಡಿ.ಎಸ್. ಭಟ್ಟ, ಗೋಪಾಲಕೃಷ್ಣ ಬರಗದ್ದೆ ಇತರರಿದ್ದರು.