ಔರಾದ್: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿಯ ಅಭಿಯಾನ ಜನವರಿ 15 ರಿಂದ ಫೆ. 5 ರವರೆಗೆ ಜಗತ್ತಿನಾದ್ಯಂತ ನಡೆಯುತ್ತಿದೆ. ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಿ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅಭಿಯಾನದ ತಾಲೂಕು ಸಂಯೋಜಕ ಡಾ. ಶಾಲಿವಾನ ಉದಗೀರೆ ಕೋರಿದರು.
ಪಟ್ಟಣದ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿ ಅಭಿಯಾನ ಬೈಠಕ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಂದಿರ ರಚನೆ ಹಾಗೂ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕಾಗಿ ಜಗತ್ತಿನಾದ್ಯಂತ ಸಮಿತಿಗಳು ರಚಿಸಲಾಗಿದೆ. ಎಲ್ಲರ ಸಹಭಾಗಿತ್ವಕ್ಕಾಗಿ ಈ ಮಹಾ ಅಭಿಯಾನ ನಡೆಯುತ್ತಿದೆ ಎಂದರು.
ಮಂದಿರ ನಿರ್ಮಾಣಕ್ಕೆ ಬೇಕಾಗಿರುವ ಹಣವನ್ನು ಜಗತ್ತಿನಾದ್ಯಂತ ಇರುವ ಅಸಂಖ್ಯಾತ ಭಕ್ತರ ಸಹಭಾಗಿತ್ವದಲ್ಲಿ ಸಂಗ್ರಹಿಸಲಾಗುತ್ತಿದೆ. ಪ್ರತಿಯೊಂದು ರಾಜ್ಯ, ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಮಿತಿ ರಚನೆ ಮಾಡಿ ಜನರ ಸಹಭಾಗಿತ್ವ ಪಡೆಯಲಾಗುತ್ತಿದೆ. ಸಮಿತಿಗೆ ನೇಮಕವಾದ ಪ್ರಮುಖರು ಹೋಬಳಿ, ಗ್ರಾಮ ವ್ಯಾಪ್ತಿಗಳಲ್ಲಿ ಪ್ರತಿಯೊಂದು ಮನೆಯಿಂದ ಕಾಣಿಕೆಯನ್ನು ಸಂಗ್ರಹಿಸುವ ಕಾರ್ಯವನ್ನು ಯಾವುದೇ ತಾರತಮ್ಯ ಇಲ್ಲದೆ ಮಾಡಬೇಕು ಎಂದರು.
ರಾಮಮಂದಿರ ನಿರ್ಮಾಣದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಇದು ಪ್ರತಿಯೊಬ್ಬ ಭಾರತೀಯರಿಗೆ ಹೆಮ್ಮೆ ಮೂಡಿಸಿದೆ ಎಂದರು. ಪ್ರಮುಖರಾದ ಜೈಭೀಮ ಸೋಲಾಪುರೆ, ಹಾವಪ್ಪ ದ್ಯಾಡೆ ಇತರರಿದ್ದರು.