ಬೂದಿಕೋಟೆ: ಸುಮಾರು 20 ವರ್ಷಗಳಿಂದ ರಾಮ ಜಪ ಮಾಡುತ್ತ, ರಾಮನಾಮವನ್ನು ಕೋಟಿ ಬಾರಿ ಬರೆದ ಮುಸ್ಲಿಂ ಸಮುದಾಯದ ರಾಮಭಕ್ತನ ರಾಮನಾಮ ಭಂಡಾರ ಸದ್ಯವೇ ಭದ್ರಾಚಲಂ ನ ಶ್ರೀರಾಮ ಸನ್ನಿಧಾನವನ್ನು ತಲುಪಲಿದೆ. ಗ್ರಾಮಸ್ಥರ ಸಹಕಾರದಿಂದ ಭದ್ರಾಚಲಂಗೆ ತಲುಪಿಸಲು ಸೋಮವಾರ ರಾತ್ರಿ ಆ ಭಕ್ತ 40ಕ್ಕೂ ಹೆಚ್ಚು ಗ್ರಾಮಸ್ಥರೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ಮಾಗೊಂದಿ ಗ್ರಾಮದ ಮುಸ್ಲಿಂ ಸಮುದಾಯದ ಪಾಚಾಸಾಬಿ ಅವರೇ ಆ ಭಕ್ತ. ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಪಾಚಾಸಾಬಿ ಪಂಡಿತ ಪಾಚಾಸಾಬಿ ಎಂದಲೇ ಚಿರಪರಿಚಿತರು. ಕನ್ನಡದಲ್ಲಿ ಲೋವರ್ ಸೆಕೆಂಡರಿ ಪಾಸಾಗಿ, ಮೈಸೂರು ಮಹಾರಾಜರ ಕಾಲದಲ್ಲಿ ಕೋಲಾರ ಜಿಲ್ಲೆಯ ಜಕ್ಕರಸಕುಪ್ಪ, ರಾಮನಗರ ಜಿಲ್ಲೆಯ ಅಂಚೆಕೆಂಪನದೊಡ್ಡಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಪಾಧ್ಯಾಯರಾಗಿ ನಂತರ ಮುಖ್ಯಶಿಕ್ಷಕರಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸೇವೆಯಲ್ಲಿದ್ದಾಗಲೇ ರಜೆ ಹಾಕಿ ಮನೆ ಮಂದಿ ಬಿಟ್ಟು ದೇಶಾಂತರ ಹೊರಟು 20 ವರ್ಷಗಳ ಕಾಲ ಸಾಧು ಸಂತರ ಜತೆ ದೇಶ ಸುತ್ತಾಡಿದ್ದಾರೆ. ದೇಶ ಪರ್ಯಟನೆಯ ಸಂದರ್ಭದಲ್ಲಿ ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ರಾಮನ ದರ್ಶನ ಪಡೆದು ಹೊರಬರುತ್ತಿದ್ದಾಗ ಭಕ್ತನೊಬ್ಬ ರಾಮನಾಮವನ್ನು ಬರೆಯುತ್ತಿದ್ದ. ಅದನ್ನು ಗಮನಿಸಿ, ತಾವೂ ಸಹ ರಾಮಕೋಟಿ ಬರೆಯಲು ದೃಢ ಸಂಕಲ್ಪ ತೆಗೆದುಕೊಂಡು, ಅಲ್ಲಿಯೇ ಒಂದು ಪುಸ್ತಕ ಖರೀದಿಸಿ ಶ್ರೀರಾಮನನ್ನು ಮನಸ್ಸಿನಲ್ಲಿ ಸ್ಮರಿಸುತ್ತಾ ಶ್ರೀರಾಮನಾಮವನ್ನು ಬರೆಯಲು ಆರಂಭಿಸಿದರು. ಸುಮಾರು 20 ವರ್ಷಗಳ ಕಾಲ ರಾಮನಾಮವನ್ನು ಬರೆಯುತ್ತಾ ಬಂದಿದ್ದು, 2020ರ ಅಗಸ್ಟ್ ಮಾಸಾಂತ್ಯಕ್ಕೆ$ ಒಂದು ಕೋಟಿ ರಾಮನಾಮಗಳನ್ನು ಬರೆದಿದ್ದಾರೆ. ಈ ರಾಮನಾಮದ ಬಂಡಾರವನ್ನು ಭದ್ರಾಚಲಂ ಅಥವಾ ಅಯೋಧೆ್ಯೆಯ ರಾಮನ ಸನ್ನಿದಾನಕ್ಕೆ ತಲುಪಿಸಬೇಕು ಎಂಬ ಮಹದಾಸೆಯನ್ನು ಪಾಚಾಸಾಬಿ ಹೊಂದಿದ್ದರು. ಆದರೆ ಹಣಕಾಸಿನ ಅಭಾವ ಹಾಗೂ ಕರೊನಾದಿಂದ ಆಸೆ ಕೈಗೂಡಿರಲಿಲ್ಲ. ಕಡೆಗೂ ಮಾಗೊಂದಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ನಾಯ್ಡು ಹಾಗೂ ಗ್ರಾಮದ ಇತರರ ಸಹಕಾರದಿಂದ ಗ್ರಾಮದ ಸುಮಾರು 40ಕ್ಕೂ ಹೆಚ್ಚು ಮಂದಿ ಪಾಚಾಸಾಬಿ ಅವರೊಂದಿಗೆ ಆಂದ್ರಪ್ರದೇಶದ ಭದ್ರಾಚಲಂಗೆ ಪ್ರಯಾಣ ಬೆಳೆಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ನಾಯ್ಡು, ರಾವೇಂದ್ರ ರಾವ್, ವೆಂಕಟಾಚಲಪತಿ, ಕಲಮಪ್ಪ, ಬಾಲರೆಡ್ಡಿ ಹಾಗೂ ಗ್ರಾಮಸ್ಥರು ಇದ್ದರು.
ರಾಮನ ಮೇಲೆ ಅಪಾರವಾದ ಭಕ್ತಿ ಉಂಟಾಗಿ ರಾಮನಾಮವನ್ನು ಕೋಟಿ ಬಾರಿ ಬರೆದಿದ್ದು, ಎರಡು ವರ್ಷಗಳಿಂದ ಅದನ್ನು ರಾಮನ ಸನ್ನಿದಾನಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. ಈಗ ಗ್ರಾಮಸ್ಥರ ನೆರವಿನಿಂದ ಭದ್ರಾಚಲಂಗೆ ತಲುಪಿಸಿ ಭಗವಂತನ ಆಶೀರ್ವಾದ ಪಡೆಯಲು ಪ್ರಯಾಣ ಬೆಳೆಸಿದ್ದೇವೆ. ಪಾಚಾಸಾಬಿ, ರಾಮಭಕ್ತ
ಮುಸ್ಲಿಂ ಸಮುದಾಯದಲ್ಲಿ ಜನಿಸಿ ರಾಮನಾಮವನ್ನು ಕೋಟಿ ಬಾರಿ ಬರೆದಿದ್ದಾರೆ. ಈಗ ಅವರಿಗೆ 98 ವರ್ಷ ವಯಸ್ಸಾಗಿದ್ದು, ಅವರ ಆಸೆಯಂತೆ ಗ್ರಾಮಸ್ಥರೆಲ್ಲಾ ಸೇರಿ ರಾಮನಾಮವನ್ನು ಭದ್ರಾಚಲಂಗೆ ತಲುಪಿಸಲು ಮುಂದಾಗಿದ್ದು, ಸುಮಾರು 40 ಮಂದಿ ದೇವಸ್ಥಾನಕ್ಕೆ ಹೊರಟಿದ್ದೇವೆ. ಶ್ರೀನಿವಾಸ ನಾಯ್ಡು, ಗ್ರಾಪಂ ಮಾಜಿ ಅಧ್ಯಕ್ಷ ಮಾಗೊಂದಿ