ರಾಮನಾಮ ಬರೆಯುತ್ತಿರುವ ಅನ್ನಪೂರ್ಣ ನಿರಂಜನ. 
ಜಿಲ್ಲೆ

ರಾಮನಾಮದ ದಾಖಲೆ ಅಕ್ಷರ ನಮನ..!

ಸಂತೋಷ ದೇಶಪಾಂಡೆ

ಅಶೋಕ ಶೆಟ್ಟರ, ಬಾಗಲಕೋಟೆ: ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣ ಆಗಬೇಕು, ತಮ್ಮ ಕುಟುಂಬದಲ್ಲಿ ಸುಖ, ಶಾಂತಿ ನೆಲಸಬೇಕು, ಲೋಕ ಕಲ್ಯಾಣವಾಗಬೇಕು ಎನ್ನುವ ಸಂಕಲ್ಪದೊಂದಿಗೆ ನಿತ್ಯ ರಾಮನಾಮ ಅಕ್ಷರದ ಜಪ ಆರಂಭಿಸಿದ್ದ ಮಹಿಳೆಯರ ಕನಸು ಕೊನೆಗೂ ಈಡೇರಿದೆ.

ಹೌದು, ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದ ಅನ್ನಪೂರ್ಣ ನಿರಂಜನ ಎನ್ನುವ ಎನ್ನುವ ಮಹಿಳೆಯ ಇಂತದ್ದೊಂದು ಸಂಕಲ್ಪದೊಂದಿಗೆ ಪುಸ್ತಕದಲ್ಲಿ ನಿತ್ಯ ರಾಮನಾಮ ಬರೆಯುತ್ತ ಬಂದಿದ್ದರು. ಕಳೆದ ೩೫ ವರ್ಷಗಳಿಂದ ತಪ್ಪದೇ ರಾಮನಾಮ ಜಪ ಮಾಡಿರುವ ಅವರು ಇವತ್ತಿಗೆ ಒಟ್ಟು ದಾಖಲೆಯ ೧೬,೬೮,೩೬೮ ಸಲ ಜೈ ಶ್ರೀರಾಮ ಎಂದು ಬರೆದಿದ್ದಾರೆ. ಹೀಗೆ ಬರೆದ ಅಕ್ಷರಗಳು ಒಟ್ಟು ೩೧ ಪುಸ್ತಕಗಳನ್ನು ತುಂಬಿಸಿವೆ ಎನ್ನುವುದು ಅಚ್ಚರಿ ಎನ್ನಿಸಿದರೂ ರಾಮ ಭಕ್ತಿಯ ಮುಂದೆ ಈ ಅಂಕಿ-ಸಂಖ್ಯೆಗಳಲ್ಲ ಗೌಣ.

ಗದ್ದಗಕೇರಿ ಗ್ರಾಮದಲ್ಲಿ ಅನ್ನಪೂರ್ಣ ಅವರ ಪತಿ ೧೯೮೮-೮೯ರಲ್ಲಿ ಮನೆಯೊಂದನ್ನು ಕಟ್ಟಿಸಲು ಆರಂಭಿಸಿದ್ದರು. ಅದೇ ವೇಳೆ ದೇಶದಲ್ಲಿ ರಾಮ ಮಂದಿರ ಕಟ್ಟುವ ಚರ್ಚೆ ಮತ್ತು ಹೋರಾಟಗಳು ತೀವ್ರಗೊಂಡಿದ್ದವು. ಮೊದಲೇ ರಾಮ ಭಕ್ತೆ ಆಗಿದ್ದ ಅನ್ನಪೂರ್ಣ ಅವರು ಹೌದು, ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮನ ದೇಗುಲ ಆಗಬೇಕು. ಅಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಆಗಬೇಕು ಎಂದು ೧೯೮೯ರಿಂದ ನಿತ್ಯ ಬೆಳಗ್ಗೆ ಒಂದೇರೆಡು ಗಂಟೆ ರಾಮನಾಮ ಜಪ ಆರಂಭಿಸಿದರು. ಪುಸ್ತಕದಲ್ಲಿ ಜೈಶ್ರೀರಾಮ ಎಂದು ಬರೆಯಲು ಆರಂಭಿಸಿದರು.

ಅನ್ನಪೂರ್ಣ ಅವರ ರಾಮ ಭಕ್ತಿಗೆ ಪತಿ ಯಲ್ಲಪ್ಪ ಅವರು ಪ್ರೋತ್ಸಾಹಿಸುತ್ತ ಬಂದರು. ವಿಶೇಷ ಎಂದರೆ ಯಲ್ಲಪ್ಪ ಹಾಗೂ ಅನ್ನಪೂರ್ಣ ದಂಪತಿಗೆ ಮಕ್ಕಳು, ಸೊಸೆಯಂದಿರುವ, ಮೊಮ್ಮಕ್ಕಳು ಸೇರಿ ಮನೆಯಲ್ಲಿ ಒಟ್ಟು ೨೫ ಜನರು ಇದ್ದಾರೆ. ಅನ್ನಪೂರ್ಣ ಅವರ ರಾಮಭಕ್ತಿ ಮನೆಯವರ ಮೇಲೂ ಪ್ರಭಾವ ಬೀರಿದೆ. ಇದೀಗ ಅನ್ನಪೂರ್ಣ ಅವರಿಗೆ ಜ. ೨೨ ರಂದು ರಾಮಲಲ್ಲಾ ಪ್ರತಿಷ್ಠಾಪನೆಗೆ ಹೋಗಬೇಕು ಎನ್ನುವ ಬಯಕೆ. ಆದರೆ, ಅವಕಾಶ ಸಿಗಲ್ಲವಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಇಡೀ ಕುಟುಂಬ ಸಮೇತ ಅಯೋಧ್ಯೆಗೆ ತೆರಳು ತಾವು ಬರೆದಿರುವ ಜೈಶ್ರೀರಾಮ ಅಕ್ಷರ ತುಂಬಿರುವ ೩೧ ಪುಸ್ತಕಗಳನ್ನು ರಾಮ ಮಂದಿರಕ್ಕೆ ಸಲ್ಲಿಸಿ ಬರುವುದಾಗಿ ಹೇಳುತ್ತಾರೆ.

ಅನ್ನಪೂರ್ಣ ಅವರಿಗೆ ಗೌರವ ಸನ್ಮಾನ :
ಬಾಗಲಕೋಟೆ ಸಮೀಪದ ಗದ್ದನಕೇರಿಯಲ್ಲಿ ರಾಮ ಮಂದಿರಕ್ಕಾಗಿ ಕಾಯ್ದು ಕುಳಿತಿದ್ದ ಶಬರಿ ರೂಪದ ಅನ್ನಪೂರ್ಣ ಇದ್ದಾರೆ. ೩೫ ವರ್ಷಗಳಿಂದ ನಿತ್ಯ ರಾಮನಾಮ ಬರೆಯುತ್ತಾರೆ ಎನ್ನುವ ವಿಷಯ ತಿಳಿದು ಭಾನುವಾರ ಅವರ ನಿವಾಸಕ್ಕೆ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಹಿಂದು ಸಂಘಟನೆ ಮುಖಂಡ ಬಸವರಾಜ್ ಯಂಕಂಚಿ, ಸಾಮಾಜಿಕ ಕಾರ್ಯಕರ್ತ ಘನಶಾಮ ಭಾಂಡಗೆ ಸೇರಿ ಹಲವರು ಭೇಟಿ ನೀಡಿ ಅನ್ನಪೂರ್ಣ ಹಾಗೂ ಯಲ್ಲಪ್ಪ ದಂಪತಿಯನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿದರು.

ಅನ್ನಪೂರ್ಣ ಅವರ ರಾಮಭಕ್ತಿಯನ್ನು ಕೊಂಡಾಡಿದರು. ಈ ದೇಶದಲ್ಲಿ ಇಂಥ ಕೋಟ್ಯಂತರ ಭಕ್ತರ ನಿತ್ಯ ಪೂಜೆ, ಆರಾಧನೆ, ಸಂಕಲ್ಪಗಳ ಸಲವಾಗಿಯೇ ಇವತ್ತು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆಗುತ್ತಿದೆ. ಇಂಥ ಭಕ್ತರನ್ನು ನೋಡಿ ಮನ ತುಂಬಿದೆ ಎಂದು ಪಿ.ಎಚ್.ಪೂಜಾರ ಹೇಳಿದರು.
ಸಾಮಾಜಿಕ ಕಾರ್ಯಕರ್ತ ಘನಶಾಮ ಭಾಂಡಗೆ, ಇವರ ಇಡೀ ಕುಟುಂಬ ರಾಮಭಕ್ತರು. ಅನ್ನಪೂರ್ಣ ಅವರು ಸಾವಜಿ ಆಗಿದ್ದರೂ ರಾಮನಾಮ ಬರೆಯಲು ಆರಂಭಿಸಿದ ಬಳಿಕ ೩೫ ವರ್ಷಗಳಿಂದ ಮಾಂಸ ಸೇವನೆ ಬಿಟ್ಟಿದ್ದಾರೆ. ಇವರು ಬಾಗಲಕೋಟೆ ಶಬರಿ ಆಗಿದ್ದಾರೆ.