ಜಿಲ್ಲೆ

ರಾಮನಾಥಪುರದಲ್ಲಿ ಸಂಭ್ರಮದ ದಿವ್ಯ ರಥೋತ್ಸವ

ಅರಕಲಗೂಡು: ತಾಲೂಕಿನ ದಕ್ಷಿಣ ಕಾಶಿ ರಾಮನಾಥಪುರದಲ್ಲಿ ಶ್ರೀ ಅಗಸ್ತ್ಯೇಶ್ವರ ದೇವಾಲಯದ ದಿವ್ಯ ರಥೋತ್ಸವ ಗುರುವಾರ ಸಂಭ್ರಮದಿಂದ ನಡೆಯಿತು.

ಕಾವೇರಿ ನದಿ ದಂಡೆ ಮೇಲಿರುವ ಇತಿಹಾಸ ಪ್ರಸಿದ್ಧ ಅಗಸ್ತ್ಯೇಶ್ವರ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ಬೆಳಗ್ಗ ವಿವಿಧ ಪ್ರಜಾ ಕೈಂಕರ್ಯ ವಿಧಿವತ್ತಾಗಿ ನೆರವೇರಿತು. ದೇವರಿಗೆ ಬಿಲ್ವಾರ್ಚನೆ, ಅಭಿಷೇಕ, ಮಹಾ ಮಂಗಳಾರತಿ ಮಾಡಲಾಯಿತು. ಲೋಪಾಮುದ್ರೆ ಕಾವೇರಿ ಮೂಲ ವಿಗ್ರಹಕ್ಕೆ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಗಿತ್ತು.

ಮಧ್ಯಾಹ್ನ ಶುಭಮುಹೂರ್ತದಲ್ಲಿ ದೇವರ ಉತ್ಸವ ಮೂರ್ತಿಯನ್ನು ದೇವಾಲಯ ಸುತ್ತ ಪ್ರದಕ್ಷಿಣಿ ಹಾಕಿಸಿ ಹೊರತಂದು ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಭಕ್ತರು ದೇವರ ನಾಮಸ್ಮರಣೆ ಮಾಡುತ್ತ ತೇರು ಎಳೆದು ಭಕ್ತಿ ಭಾವ ಸಮರ್ಪಿಸಿದರು. ದೇವಸ್ಥಾನದಲ್ಲಿ ಭಕ್ತರು ಪ್ರಜೆ ಸಲ್ಲಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ತಹಸೀಲ್ದಾರ್ ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯರಾದ ಸಿದ್ದಯ್ಯ, ಮೋಹನ್, ಗ್ರಾಮಸ್ಥರು ಪಾಲ್ಗೊಂಡಿದ್ದರು.