ಜಿಲ್ಲೆ

ರಾಮನಾಥಪುರ-ಕುಶಾಲನಗರ ನಡುವೆ:ಬಸ್ ಸಂಚಾರ ಒತ್ತಾಯ

ಹಾಸನ: ರಾಮನಾಥಪುರ ಹಾಗು ಕೊಡಗಿನ ಕುಶಾಲನಗರ ನಡುವೆ ನಿತ್ಯವೂ ಬೆಳಿಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಎರಡು ವಿಶೇಷ ಬಸ್‌ಗಳ ಸಂಚಾರವನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದು ಹಾಸನ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ಎಂ.ದೀಪಕ್ ಕುಮಾರ್ ಭರವಸೆ ನೀಡಿದರು.
ಅರಕಲಗೂಡು ತಾಲೂಕಿನ ಕಡುವಿನಹೊಸಹಳ್ಳಿಯ ಗ್ರಾಮ ಪಂಚಾಯಿತಿ ಅದ್ಯಕ್ಷ ಶೇಖರ್ ಅವರ ನೇತೃತ್ವದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗುವುದು. ಈಗಾಗಲೇ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಇದನ್ನ ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅದ್ಯಕ್ಷ ಶೇಖರ್ ಮಾತನಾಡಿ, ಕಡುವಿನಹೊಸಳ್ಳಿ ಹಾಗು ಬಸವನಹಳ್ಳಿ ನಡುವೆ ಹರಿಯುವ ಕಾವೇರಿ ನದಿಗೆ 20 ವರ್ಷಗಳ ಹಿಂದೆ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಈ ಮಾರ್ಗದಲ್ಲಿ ಸಾರಿಗೆ ಬಸ್‌ಗಳ ಸಂಚಾರ ಇಲ್ಲದಿರುವುದ್ದರಿಂದ ಕಡುವಿನಹೊಸಹಳ್ಳಿ, ಕೆ.ಬಸವನಹಳ್ಳಿ, ಕಣಗಾಲ್, ಸೇರಿ ಹತ್ತಾರು ಹಳ್ಳಿಗಳ ಜನರಿಗೆ ಸಮಸ್ಯೆಯಾಗಿದೆ ಹಾಗಾಗಿ ರಾಮನಾಥಪುರ ಘಟಕದ ವತಿಯಿಂದ ಬಸ್ ಸಂಚಾರವನ್ನು ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಮನಾಥಪುರದಿಂದ ಹೊರಟು ಕೊಣನೂರು, ಸಿದ್ದಾಪುರ, ಕಡುವಿನಹೊಸಳ್ಳಿ ಮಾರ್ಗವಾಗಿ ಕೆ.ಬಸವನಹಳ್ಳಿ ಹಾಗು ಕಣಗಾಲು ಗ್ರಾಮದ ಮೂಲಕ ಸಂಚರಿಸಿ ಚಾಮರಾಯನಕೋಟೆ, ಹೊನ್ನಾಪುರ ಮಾರ್ಗದಲ್ಲಿ ಸೂಳೆಕೋಟೆ ಮೂಲಕ ಹೆಬ್ಬಾಲೆ ಹಾಗು ನಂತರ ಕುಶಾಲನಗರ ತಲುಪಲಿದ್ದು, ಕುಶಾಲನಗರದಿಂದ ಹೊರಡೊ ಬಸ್ ಮೊದಲ ಸಂಚಾರದ ವೇಳೆ ಕುಶಾಲನಗರ ಹೆಬ್ಬಾಲೆ, ಸೂಳೆಕೋಟೆ, ಹೊನ್ನಾಪುರ, ಚಾಮರಾಯನಕೋಟೆ ,ಕಣಗಾಲ್ ಕಡುವಿನಹೊಸಹಳ್ಳಿ ಮೂಲಕ ರಾಮನಾಥಪುರ ತಲುಪಿದರೆ ಈ ಮೂಲಕ ಗ್ರಾಮೀಣ ಭಾಗದ ಜನರಿಗೂ ಅನುಕೂಲ ಆಗಲಿದೆ ಎಂದರು.
ಅರಕಲಗೂಡು ಶಾಸಕ ಎ.ಮಂಜು ಅವರು ಈ ಬಗ್ಗೆ ಕ್ರಮ ವಹಿಸಲು ನೀಡಿರೋ ಪತ್ರವನ್ನು ವಿಭಾಗೀಯ ನಿಯಂತ್ರಕ ದೀಪಕ್ ಕುಮಾರ್ ಅವರಿಗೆ ನೀಡಲಾಯಿತು.ಈ ಸಂದರ್ಭದಲ್ಲಿ ಕಣಗಾಲ್ ಗ್ರಾಮಪಂಚಾಯಿತಿಯ ಮಾಜಿ ಸದಸ್ಯ ಕೆ. ಶ್ರೀನಿವಾಸ್ ಹಾಗು ಗ್ರಾಮಸ್ಥ ಅಣ್ಣಾಜಿ ಇತರರು ಇದ್ದರು.