ಜಿಲ್ಲೆ

ರಾಮನಗುಡ್ಡೆ ಡ್ಯಾಂ ಪರಿಶೀಲಿಸಿದ ಶಾಸಕ ಎಂ.ಆರ್.ಮಂಜುನಾಥ್

ಕಿರಣ್ ಗೌಡ.ಜಿ

ಹನೂರು: ಬೂದುಬಾಳು ಗ್ರಾಮ ಸಮೀಪದ ನೀರು ಸರಬರಾಜು ಘಟಕದಿಂದ ರಾಮನಗುಡ್ಡೆ ಡ್ಯಾಂಗೆ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿಗೆ ಅ.13 ರಂದು ಭೂಮಿಪೂಜೆ ನೆರವೇರಲಿದ್ದು, ಭಾನುವಾರ ಸ್ಥಳಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಮನಗುಡ್ಡೆ ಡ್ಯಾಂ ಅಚ್ಚುಕಟ್ಟು ಪ್ರದೇಶದಲ್ಲಿ ನೂರಾರು ರೈತರು ಕೃಷಿ ಮಾಡುತ್ತಿದ್ದು, ಬೇಸಿಗೆ ವೇಳೆ ಡ್ಯಾಂ ಬತ್ತಿ ಹೋಗುತ್ತಿದ್ದ ಪರಿಣಾಮ ಈ ಭಾಗದ ರೈತರು ಅಂತರ್ಜಲ ಮಟ್ಟ ಕುಸಿತದಿಂದ ತೊಂದರೆ ಅನುಭವಿಸುತ್ತಿದ್ದರು. ಹಾಗಾಗಿ ಡ್ಯಾಂಗೆ ನೀರು ತುಂಬಿಸುವಂತೆ ರೈತರಿಂದ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆ ಶಾಸಕರು ಕಳೆದ ತಿಂಗಳು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿ ರೂಪುರೇಷೆಯನ್ನು ಸಿದ್ಧಪಡಿಸಿದ್ದರು. ಕೆಲ ರೈತರು ಅತಿಕ್ರಮಿಸಿ ಒತ್ತುವರಿಯಾಗಿದ್ದ ಜಾಗವನ್ನು ಅಧಿಕಾರಿಗಳಿಂದ ತೆರವುಗೊಳಿಸಿದ್ದರು. ಬೂದುಬಾಳು ಗ್ರಾಮ ಸಮೀಪದ ನೀರು ಸರಬರಾಜು ಘಟಕದಿಂದ ಹಳ್ಳದ ಮೂಲಕ ಡ್ಯಾಂಗೆ ನೀರು ಹರಿಸಲು ನಿರ್ಧರಿಸಿ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಪೂರ್ಣಗೊಂಡಿದೆ. ಆದರೆ ಘಟಕದಿಂದ 1.5 ಕಿ.ಮೀ ಪೈಪ್‌ಲೈನ್ ಕಾಮಗಾರಿಯನ್ನು ಕೈಗೊಳ್ಳಲು ಕೆಲ ಕಾರಣಾಂತರದಿಂದ ತೊಡುಕಾಗಿ ಪರಿಣಮಿಸಿತ್ತು. ಇದೀಗ ಸಮಸ್ಯೆ ಬಗೆಹರಿದಿದ್ದು, ಸೋಮವಾರ ಪೈಪ್‌ಲೈನ್ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ ನೆರವೇರಲಿದೆ.

ಈ ಹಿನ್ನೆಲೆಯಲ್ಲಿ ಭಾನುವಾರ ಶಾಸಕರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಭೂಮಿಪೂಜೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹಾಗೂ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾವೇರಿ ನೀರಾವರಿ ನಿಗಮದ ಇಇ ಉಮೇಶ್, ಎಇಇಗಳಾದ ರಾಮಕೃಷ್ಣ, ಕರುಣಾಮಯಿ, ಎಇ ಬಸವೇಶ್, ಪಿಎಸಿಸಿ ನಿರ್ದೇಶಕ ಮಂಜೇಶ್, ಮುಖಂಡರಾದ ಮಹದೇವ, ರಾಜಣ್ಣ, ಮಾದಪ್ಪ ಹಾಗೂ ಇನ್ನಿತರರು ಇದ್ದರು.