ಜಿಲ್ಲೆ

ರಾಮಕೃಷ್ಣಾಶ್ರಮದಲ್ಲಿ ಅಭಿನಂದನಾ ಸಮಾರಂಭ

ಯಾದಗಿರಿ: ಮನುಷ್ಯ ಜೀವನದಲ್ಲಿ ಎಷ್ಟೇ ಸಂಪತ್ತು, ಹಣ ಸಂಪಾದಿಸಿದರೂ ಮಾನಸಿಕ ನೆಮ್ಮದಿಯನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅಭಿಪ್ರಾಯಪಟ್ಟರು.


ನಗರದ ಶ್ರೀರಾಮಕೃಷ್ಣಾಶ್ರಮದಲ್ಲಿ ನೂತನ ಶಾಸಕರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ನಮಗೆ ಮಾನಸಿಕ ನೆಮ್ಮದಿ ಸಿಗಬೇಕಾದರೆ ಅದು ಸತ್ಸಂಗಗಳು ಹಾಗೂ ಧಾಮರ್ಿಕ ಆಚರಣೆಗಳಲ್ಲಿ ಪಾಲ್ಗೊಳ್ಳಬೇಕು. ಆದರೆ ಇಂದಿನ ಜಂಜಾಟದ ಜೀವನದಲ್ಲಿ ನಾವುಗಳು ಮಠ, ಮಂದಿರಗಳಿಂದ ದೂರವಾಗುತ್ತಿರುವುದು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ಶ್ರೀರಾಮಕೃಷ್ಣಾಶ್ರಮ ಆಶ್ರಮಕ್ಕೆ ತನ್ನದೇಯಾದ ಇತಿಹಾಸವಿದೆ. ರಾಮಕೃಷ್ಣ ಪರಮಹಂಸರು, ಮಾತೆ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಇಂದಿನ ಯುವಕರಿಗೆ ಅರಿತುಕೊಳ್ಳಬೇಕು. ಯಾದಗಿರಿಯಲ್ಲಿ ಆಶ್ರಮ ಆರಂಭಗೊಂಡು ಹಲವು ವರ್ಷಗಳು ಕಳೆದಿದ್ದು, ನೂತನ ಕಟ್ಟಡ ಹಾಗೂ ಮೂಲಸೌಕರ್ಯ ಒದಗಿಸಲು ನಾನು ಸಹಕಾರ ನೀಡುವೆ ಎಂದು ಭರವಸೆ ನೀಡಿದರು.

ಆಶ್ರಮದ ಸಂಚಾಲಕ ಪಿ.ವೇಣುಗೋಪಾಲ ಮಾತನಾಡಿ, ನಮ್ಮ ಆಶ್ರಮ ಜಿಲ್ಲೆಯಲ್ಲಿ ಆರಂಭಗೊಂಡು ಏಳೆಂಟು ವರ್ಷ ಕಳೆದಿದೆ. ಯುವಕರಿಗೆ ಶೈಕ್ಷಣಿಕ ಮುಖ್ಯವಾಹಿನಿಗೆ ತರಬೇಕು ಎಂಬುದು ನನ್ನ ಮುಖ್ಯ ಉದ್ದೇಶವಾಗಿತ್ತು. ನಾನು ಮೊದಲು ಯಾದಗಿರಿಗೆ ಬಂದಾಗ ಇಲ್ಲಿನ ಸ್ಥಿತಿಗತಿ ಕಂಡು ಸಾಕಷ್ಟು ಕಳವಳವಾಗಿತ್ತು. ಸಧ್ಯ ಆಶ್ರಮದಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶ್ರೀರಾಮಕೃಷ್ಣರ ಸಂಕಲ್ಪದಂತೆಯೇ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

ಪಂ.ನರಸಿಂಹಾಚಾರ್ಯ ಪುರಾಣಿಕ ಹಾಗೂ ಶ್ರೀಕಾಂತಾಚಾರ್ಯ ಅವರು ವೇದಘೋಷಗಳ ಮೂಲಕ ಶಾಸಕರಿಗೆ ಆಶಿರ್ವದಿಸಿದರು. ಲೆಕ್ಕ ಪರಿಶೋಧಕರಾದ ವೆಂಕಟಕೃಷ್ಣ, ಅಣ್ಣಾರಾಯ, ಗುರುಪ್ರಸಾದ ವೈದ್ಯ ಹಾಗೂ ಶಾರದಾ ಭಜನಾ ಮಂಡಳಿ ಸದಸ್ಯರು ಇದ್ದರು.