ಬೀದರ್: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ಶ್ರೀರಾಮ ಮಂದಿರಕ್ಕೆ ಇಲ್ಲಿನ ಪ್ರತಿಷ್ಠಿತ ತಾಳಂಪಳ್ಳಿ ಗ್ರೂಪ್ 5 ಲಕ್ಷ ರೂ. ದೇಣಿಗೆ ನೀಡಿದೆ.
ತಾಳಂಪಳ್ಳಿ ಗ್ರೂಪ್ ಮುಖ್ಯಸ್ಥ ದಿಲೀಪಕುಮಾರ ತಾಳಂಪಳ್ಳಿ ಅವರ ಸಲಹೆಯ ಮೇರೆಗೆ ಹಿರಿಯ ಉದ್ಯಮಿ ಧನರಾಜ ತಾಳಂಪಳ್ಳಿ, ದೇವರಾಜ ತಾಳಂಪಳ್ಳಿ, ಸಂತೋಷಕುಮಾರ ತಾಳಂಪಳ್ಳಿ ಅವರು ಸಂಸದ ಭಗವಂತ ಖೂಬಾ, ಆರೆಸ್ಸೆಸ್ ಮುಖಂಡರಾದ ನಾಗೇಶ ರೆಡ್ಡಿ, ಹಣಮಂತರಾವ ಪಾಟೀಲ್ ಅವರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಿಗೆ ಬರೆದ 5 ಲಕ್ಷ ರೂ.ಚೆಕ್ ಹಸ್ತಾಂತರ ಮಾಡಿದರು.
ಈ ವೇಳೆ ಮಾತನಾಡಿದ ಸಂಸದ ಖೂಬಾ, ತಾಳಂಪಳ್ಳಿ ಗ್ರೂಪ್ ಉದ್ಯಮ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಹೆಸರು ಗಳಿಸಿದೆ. ತಾಳಂಪಳ್ಳಿ ಸಹೋದರರು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿರಂತರ ಸಹಾಯ, ಸಹಕಾರ ನೀಡುತ್ತಿದ್ದಾರೆ. ರಾಮ ಮಂದಿರ ನಿಧಿ ಸಮರ್ಪಣೆ ಅಭಿಯಾನಕ್ಕೆ ಜಿಲ್ಲೆಯಲ್ಲಿ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ. ಅನೇಕರು ಸ್ವಯಂ ಇಚ್ಛೆಯಿಂದ ಮುಂದೆ ಬಂದು ಶೃದ್ಧೆ, ಭಕ್ತಿಯಿಂದ ದೇಣಿಗೆ ಸಮರ್ಪಿಸುತ್ತಿದ್ದಾರೆ. ಎಲ್ಲರ ಸಹಭಾಗಿತ್ವದಿಂದ ಐತಿಹಾಸಿಕ ಮಂದಿರ ಅಯೋಧ್ಯೆಯಲ್ಲಿ ತಲೆ ಎತ್ತಲಿದೆ ಎಂದರು.
ಧನರಾಜ ತಾಳಂಪಳ್ಳಿ ಮಾತನಾಡಿ, ಶ್ರೀರಾಮ ಸರ್ವರಿಗೂ ಆದರ್ಶಪುರುಷ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡುವ ಅವಕಾಶ ಸಿಕ್ಕಿರುವುದೇ ನಮ್ಮ ಸೌಭಾಗ್ಯ. ಭಾರತೀಯರ ಏಕತೆ ಜತೆಗೆ ದೇಶದ ಪುನರುತ್ಥಾನಕ್ಕೆ ಈ ಮಂದಿರ ಪ್ರೇರಣೆಯಾಗಲಿದೆ ಎಂದು ಹೇಳಿದರು.