ಪಾಂಡವಪುರ: ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ರಸ್ತೆ ಡಾಂಬರೀಕರಣಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಬುಧವಾರ ಭೂಮಿಪೂಜೆ ನೆರವೇರಿಸಿದರು.
ಗ್ರಾಮದಲ್ಲಿ ರಾಮಮಂದಿರ ನಿರ್ಮಾಣಕ್ಕೆ ರಾಮ ಜನ್ಮಭೂಮಿ ಆಯೋಧ್ಯೆಯಿಂದ ಮಣ್ಣು ಮತ್ತು ನೀರು ಸಂಗ್ರಹ, ಕಾಶಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ಕಳಸ, ತಲಕಾವೇರಿ, ಸಂಗಮ, ಮೇಲುಕೋಟೆಯ ಕಲ್ಯಾಣಿ ಹಾಗೂ ತೊಣ್ಣೂರು ಕೆರೆಯಿಂದ ಸಂಗ್ರಹಿಸಲಾಗಿದ್ದ ನೀರನ್ನು ರಾಮ ಮಂದಿರದ ಪಾಯಕ್ಕೆ ಸಮರ್ಪಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಹುಲ್ಕೆರೆಕೊಪ್ಪಲು ಗ್ರಾಮಕ್ಕೆ 1 ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ರಾಮಮಂದಿರ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಲಾಗಿದೆ. ದೇಶದ ಪವಿತ್ರ ಯಾತ್ರಾ ಸ್ಥಳಗಳಿಂದ ಮಣ್ಣು ಹಾಗೂ ನೀರು ಸಂಗ್ರಹಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಚೆಲುವರಾಜು, ಗುರುಸ್ವಾಮಿ, ತಾಪಂ ಮಾಜಿ ಸದಸ್ಯ ನಿಂಗೇಗೌಡ, ಉದ್ಯಮಿ ಮಧುಸೂದನ್, ಜೆಡಿಎಸ್ ಮುಖಂಡರಾದ ಅಯ್ಯಣ್ಣ, ಮನು, ಗ್ರಾಪಂ ಸದಸ್ಯ ಕೆಂಪರಾಜು ಇತರರು ಇದ್ದರು.