ಜಿಲ್ಲೆ

ರಾಮ ಮಂತ್ರವ ಜಪಿಸೋ ಹೇ ಮನುಜ…

ಚಿತ್ರದುರ್ಗ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಕ್ತಿ ಸಮರ್ಪಣೆ ವೇಳೆ ನೇರ ಪ್ರಸಾರ ವೀಕ್ಷಿಸುವ ಮೂಲಕ ಸೋಮವಾರ ಕೋಟೆನಾಡಿನಾದ್ಯಂತ ರಾಮೋತ್ಸವ ಆಚರಿಸಿದ ಅಸಂಖ್ಯಾತ ಭಕ್ತರು ಹರ್ಷೋತ್ಸವದಲ್ಲಿ ಮುಳುಗಿದರು. ಸಂಜೆ ಹಲವೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಗರ ಸೇರಿ ತಾಲೂಕಿನ ಅನೇಕ ಶ್ರೀರಾಮಮಂದಿರ, ಆಂಜನೇಯ, ಶಿವ, ದೇವಿ, ವೆಂಕಟೇಶ್ವರ ಸೇರಿ ವಿವಿಧ ದೇಗುಲಗಳಲ್ಲಿ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ, ಪೂಜೆ, ಆರಾಧನೆ, ಪ್ರಾರ್ಥನೆ, ಭಜನೆ ಜತೆಗೆ ಪ್ರಸಾದ ವಿತರಣೆ ಜರುಗಿದವು.

ನಗರದ ಆನೆಬಾಗಿಲು, ರಂಗಯ್ಯನಬಾಗಿಲು ಸೇರಿ ವಿವಿಧೆಡೆ ಕಲ್ಪಿಸಿದ್ದ ಎಲ್‌ಇಡಿ ಪರದೆ ಮೂಲಕ ಪ್ರತಿಷ್ಠಾಪನೆಯ ಕ್ಷಣ ಹಲವರು ಕಣ್ತುಂಬಿಕೊಂಡರು. ಧ್ವಜ, ಗೋ ಪೂಜೆಗಳು ನಡೆದವು.

ಹೊರವಲಯದ ತಮಟಕಲ್ಲು ಆಂಜನೇಯ, ಮಾನಂಗಿ ಆಂಜನೇಯ, ಹೊಳಲ್ಕೆರೆ ರಸ್ತೆ 8ನೇ ಮೈಲು ಆಂಜನೇಯ, ಬರಗೇರಿ ಆಂಜನೇಯ, ಹೌಸಿಂಗ್ ಬೋರ್ಡ್ ಕಾಲನಿಯ ಪಂಚಮುಖಿ ಆಂಜನೇಯ, ಬುರುಜನಹಟ್ಟಿ ತಗ್ಗಿನ ಆಂಜನೇಯ, ಜಿಲ್ಲಾ ಕ್ರೀಡಾಂಗಣ ಮಾರ್ಗದ ವೀರಾಂಜನೇಯ, ಮದಕರಿನಾಯಕ ವೃತ್ತ ಸಮೀಪದ ರಕ್ಷಾಂಜನೇಯ ಸೇರಿ ವಿವಿಧ ಆಂಜನೇಯ ಸ್ವಾಮಿ ದೇಗುಲಗಳಲ್ಲಿ ರಾಮೋತ್ಸವ ನೆರವೇರಿತು.

ರಂಗಯ್ಯನ ಬಾಗಿಲು ಸಮೀಪದ ಶ್ರೀರಾಮಮಂದಿರ ಮುಂಭಾಗ ಜೈ ಶ್ರೀರಾಮ್ ಬಳಗದಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪಾಲ್ಗೊಂಡಿದ್ದರು. ನಂತರ ಪ್ರಸಾದ ವಿತರಿಸಲಾಯಿತು.

ಕಣಿವೆ ಆಂಜನೇಯ ಸ್ವಾಮಿ ಸನ್ನಿಧಿಗೂ ಸಾವಿರಾರು ಭಕ್ತರು ಭೇಟಿ ನೀಡಿ ಭಕ್ತಿ ಸಮರ್ಪಿಸಿದರು. ಪಲ್ಲಕ್ಕಿಯಲ್ಲಿ ರಾಮ ಪರಿವಾರದ ಉಯ್ಯಲೆ ತೂಗಿ, ಸ್ವಾಮಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪುಷ್ಪಾಲಂಕಾರ ಕಣ್ಮನ ಸೆಳೆಯಿತು. ಹಲವೆಡೆ ಅನ್ನ ಸಂತರ್ಪಣೆ, ಉಪಾಹಾರ, ಲಾಡು ಸೇರಿ ಸಿಹಿ ವಿತರಿಸುವ ಮೂಲಕ ಆಚರಿಸಲಾಯಿತು.

ಆರ್ಯವೈಶ್ಯ ಸಂಘದಿಂದ ವಾಸವಿ ಮಹಲ್ ರಸ್ತೆಯ ಕನ್ಯಕಾ ಪರಮೇಶ್ವರಿ ದೇವಿ ದೇಗುಲದಲ್ಲಿ ದಿನವಿಡಿ ವಿಶೇಷ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಸಂಜೆ ಸಾವಿರಾರು ದೀಪಗಳ ಪ್ರಜ್ವಲನೆಗೆ ಭಕ್ತರು ಸಾಕ್ಷಿಯಾದರು. ಸಾವಿರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಆಂಜನೇಯ ಸ್ವಾಮಿ, ಮಹಾವಿಷ್ಣು ಮೂರ್ತಿಗೆ ಫಲ ಪಂಚಾಮೃತ ಅಭಿಷೇಕ, ವಿಶೇಷಾಲಂಕಾರ, ಅರ್ಚನೆ, ರಾಮತಾರಕ ಹೋಮ ನೆರವೇರಿತು. ಅಯ್ಯಪ್ಪಸ್ವಾಮಿ ಗರ್ಭಗುಡಿ, ಆಂಜನೇಯ ಸ್ವಾಮಿ ಆವರಣದಲ್ಲಿ ಸಂಜೆ ದೀಪಾರಾಧನೆ ಜರುಗಿತು. ಇಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಿತ್ತು.

ಶ್ರೀರಾಮ, ಆಂಜನೇಯನ ಕಟೌಟ್‌ಗಳಿಗೂ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಒಟ್ಟಾರೆ ವಿಶೇಷ ಪೂಜೆ, ಅಲಂಕಾರ ಇತರೆ ಧಾರ್ಮಿಕ ಕಾರ್ಯಕ್ರಮಗಳು ಕಳೆಗಟ್ಟಿದ್ದವು.