ಚಿಕ್ಕಮಗಳೂರು: ಸಾಂಸ್ಕೃತಿಕ ಸಂಘ, ಯಕ್ಷಗಾನ ಅಭಿಮಾನಿ ಬಳಗ ಮತ್ತು ಹವ್ಯಕ ಬಳಗದಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ತೆಂಕು ತಿಟ್ಟಿನ ಖ್ಯಾತ ಕಲಾವಿದರು ಮಂಗಳವಾರ ಪ್ರದರ್ಶಿಸಿದ ರಾಧಾ ವಿಲಾಸ ಮತ್ತು ಭೃಗು ಶಾಪ ಯಕ್ಷಗಾನ ಕಥಾನಕಗಳನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು.
ಭಾಗವತರ ಕಂಚಿನ ಕಂಠದ ಗಾಯನ, ಕಲಾವಿದರ ನವಿರು ಹಾಸ್ಯ, ಚುರುಕು ಸಂಭಾಷಣೆ, ಪ್ರಾಸಬದ್ಧ ಮಾತು, ಮಾತಿನ ಚಾತುರ್ಯ, ಮನಮೋಹಕ ನೃತ್ಯ, ಮನೋಜ್ಞ ಅಭಿನಯ ಸಭಿಕರನ್ನು ತಲೆದೂಗುವಂತೆ ಮಾಡಿತು. ಭಾಗವತಿಕೆಯಲ್ಲಿ ಪಟ್ಲ ಸತೀಶ್ ಶೆಟ್ಟಿ ಮತ್ತು ರವಿಚಂದ್ರ ಕನ್ನಡಿಕಟ್ಟೆ ವಿಷ್ಣುವಿನ ಪಾತ್ರದಲ್ಲಿ ವಾಸುದೇವ ರಂಗಾ ಭಟ್, ಭೃಗು ಮಹರ್ಷಿಯಾಗಿ ಜಯಪ್ರಕಾಶ್ ಶೆಟ್ಟಿ ಪೆಮುದೆ, ದೇವೇಂದ್ರನಾಗಿ ಪೆರ್ಲ ಜಗನ್ನಾಥ ಶೆಟ್ಟಿ, ತಮಾಸುರನಾಗಿ ಜಗದಾಭಿರಾಮ ಪಡುಬಿದ್ರಿ, ರಾಧೆಯಾಗಿ ಸಂತೋಷ್ಕುಮಾರ್, ಕೃಷ್ಣನಾಗಿ ರಕ್ಷಿತ್ ಶೆಟ್ಟಿ ಪಡ್ರೆ, ಸಖನಾಗಿ ಸೀತಾರಾಮಕುಮಾರ್ ಕಟೀಲ್, ಸಖಿ ಪಾತ್ರದಲ್ಲಿ ರಕ್ಷಿತ್ ಮುಂಬೈ ಗಮನ ಸೆಳೆದರು.